ಬೆಂಗಳೂರು: ಕ್ರೀಡೆಯಷ್ಟೇ ಅಲ್ಲದೇ ಬದುಕಿನಲ್ಲಿಯೂ ಪ್ರಾಮಾಣಿಕತೆ ಮತ್ತು ಶಿಸ್ತು ಮೈಗೂಡಿಸಿಕೊಂಡರೆ ಯಶಸ್ಸು ಸದಾ ನಮ್ಮ ಹಿಂದೆ ಇರುತ್ತದೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಂತಾರಾಷ್ಟ್ರೀಯ ಮಾಜಿ ವಿಕೆಟ್ ಕೀಪರ್ ಸೈಯದ್ ಕಿರ್ಮಾನಿ ಹೇಳಿದ್ದಾರೆ.
ಬೆಂಗಳೂರು ಜಲಮಂಡಳಿಯ 60ರ ಸಂಭ್ರಮದ ಪ್ರಯುಕ್ತ ಬಿ.ಇ.ಎಲ್ ವೃತ್ತದ ಬಿ.ಇ.ಎಲ್ ಆಟದ ಮೈದಾನದಲ್ಲಿ ವಜ್ರಮಹೋತ್ಸವ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದ ಅವರು, ಕ್ರೀಡೆ ಸಂತಸ ಮತ್ತು ಆರೋಗ್ಯದ ಪ್ರತೀಕ. ಆರೋಗ್ಯ ಭಾಗ್ಯವಷ್ಟೇ ಅಲ್ಲದೇ ಸಂಪತ್ತು ಕೂಡ ಆಗಿದೆ. ಉತ್ತಮ ಆರೋಗ್ಯ ಇದ್ದರೆ ಸೂಕ್ತ ಹಾದಿಯಲ್ಲಿ ಸಾಗಲು ನೆರವಾಗಲಿದೆ ಎಂದರು.
ಪ್ರತಿದಿನ ಕನಿಷ್ಠ 50 ನಿಮಿಷ ವ್ಯಾಯಾಮಕ್ಕಾಗಿ ಮೀಸಲಿಡಬೇಕು. ನಿಜವಾದ ಕ್ರೀಡಾ ಸ್ಫೂರ್ತಿಯಿಂದ ಮುನ್ನಡೆಯಬೇಕು. ಉತ್ತಮ ಕ್ರೀಡಾಪಟುಗಳನ್ನು ಕಂಡರೆ ಅಸೂಯೆ ಇರಬಾರದು. ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಗುಣವನ್ನು ರಕ್ತಗತವಾಗಿ ಮೈಗೂಡಿಸಿಕೊಳ್ಳಬೇಕು. ಉತ್ತಮ ಅಭ್ಯಾಸಗಳನ್ನು ಕಲಿತರೆ ಶ್ರೇಷ್ಠ ಕ್ರೀಡಾಪಟುವಾಗಲು ಸಾಧ್ಯ. ಇದರಿಂದ ದೇಶಕ್ಕೆ ಉತ್ತಮ ಹೆಸರು ತರುವ ಜೊತೆಗೆ ವೈಕ್ತಿಗತ ಬೆಳವಣಿಗೆ ಸಾಧಿಸಲು ಸಾಧ್ಯ ಎಂದು ಸಯ್ಯದ್ ಕಿರ್ಮಾನಿ ಹೇಳಿದರು. ಇದನ್ನೂ ಓದಿ: ವೈಕುಂಠ ಏಕಾದಶಿ ಪ್ರಯುಕ್ತ 1ಲಕ್ಷ ಲಡ್ಡು ವಿತರಣೆ
ಬೆಂಗಳೂರು ನೀರು ಸರಬರಾಜು ಮತ್ತು ಜಲಮಂಡಳಿ ಅಧ್ಯಕ್ಷ ಡಾ. ವಿ. ರಾಮ್ ಪ್ರಸಾತ್ ಮನೋಹರ್ ಮಾತನಾಡಿ, ಜಲಮಂಡಳಿ ಆರು ದಶಕಗಳ ಹಾದಿಯಲ್ಲಿ ಸಾಗಿ ಬಂದಿರುವುದು ಮಹತ್ವದ ಬೆಳವಣಿಗೆಯಾಗಿದೆ. ಬದುಕಿನಲ್ಲಿ ಗೆಲುವು – ಸೋಲು ಸಹಜ. ಜಲಮಂಡಳಿ ಇದಕ್ಕೆ ಜ್ವಲಂತ ಉದಾಹರಣೆ. ಸೋಲನ್ನೇ ಗೆಲುವನ್ನಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ಜಲಮಂಡಳಿ ಹೊಂದಿದೆ ಎಂದರು.
