ಬೆಂಗಳೂರು: ದೇಶದಾದ್ಯಂತ ಇಂದು ಗೌರಿ, ಗಣೇಶ ಹಬ್ಬವನ್ನು ಬಹಳ ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು, ಅದರಂತೆ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಎಚ್ಎಸ್ಆರ್ ಬಡಾವಣೆಯಲ್ಲಿ ಬಿಜೆಪಿ ಶಾಸಕರಾಗಿರುವಂತಹ ಎಂ ಸತೀಶ್ ರೆಡ್ಡಿ ಅವರು 6ನೇ ಸೆಕ್ಟರ್ ನಲ್ಲಿ ಏರ್ಪಡಿಸಿರುವ ಗಣೇಶೋತ್ಸವದಲ್ಲಿ ಭಾಗಿಯಾಗಿ ವಿಶೇಷ ಪೂಜೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಅದ್ದೂರಿಯಾಗಿ ಗಣೇಶೋತ್ಸವ ಮಾಡಲಾಗುತ್ತಿದೆ ಎಂದರು.
ಗೌರಿ, ಗಣೇಶ ಹಬ್ಬ ಹಿಂದೂಗಳ ಸಾಂಪ್ರದಾಯಿಕ ಹಬ್ಬ. ಹಿಂದಿನ ಕಾಲದಲ್ಲಿ ಬ್ರಿಟಿಷರನ್ನ ಓಡಿಸಲೆಂದು ಸಂಘಟನೆ ಯಾಗಬೇಕೆಂದು ಪ್ರಾರಂಭವಾದ ಆಂದೋಲನವು ಇಂದು ದೇಶ ಮಾತ್ರವಲ್ಲದೆ ವಿದೇಶದಲ್ಲೂ ಕೂಡ ಗಣೇಶೋತ್ಸವವನ್ನು ಬಹಳ ವಿಜೃಂಭಣೆಯಿಂದ ಎಲ್ಲರೂ ಆಚರಿಸುತ್ತಾರೆ. ನಾನು ಕೂಡ ಒಬ್ಬ ಹಿಂದೂ ಭಕ್ತನಾಗಿ ಗಣೇಶನ ಉತ್ಸವದಲ್ಲಿ ಬಹಳ ಉತ್ಸುಕತೆಯಿಂದ ಪಾಲ್ಗೊಳ್ಳುತ್ತೇನೆ. ಇದನ್ನೂ ಓದಿ: ಮಣ್ಣಿನ ಗಣಪತಿ ವಿತರಿಸಿದ ಶಾಸಕ ಕೆ ಗೋಪಾಲಯ್ಯ!
ಕಳೆದ ಒಂದು ವಾರದಿಂದ ನಮ್ಮ ಕ್ಷೇತ್ರದಲ್ಲಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಎಲ್ಲಾ ಕಡೆಗಳಲ್ಲಿ ಗಣೇಶೋತ್ಸವ ಮಾಡುತ್ತಿರುವುದು ಬಹಳ ಸಂತಸ ತಂದಿದೆ ಎಂದರು. ವಿಘ್ನಗಳನ್ನು ನಿವಾರಣೆ ಮಾಡುವ ವಿಜ್ಞೇಶ್ವರ ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಹಲವಾರು ಭಕ್ತಾದಿಗಳು ಪಾಲ್ಗೊಂಡಿದ್ದರು.
