ಹಾಸನ: ಕರ್ನಾಟಕ ರಾಜ್ಯ ಸರ್ಕಾರವು ಈ ಬಾರಿ ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿಯ ವಿಜೇತ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿದೆ. ಬಾನು ಮುಷ್ತಾಕ್ ಅವರು ಮುಸ್ಲಿಂ ಮಹಿಳೆ ಆಗಿರುವುದರಿಂದ ಕೆಲ ಬಿಜೆಪಿ ನಾಯಕರು ಬಾನು ಮುಷ್ತಾಕ್ ಅವರು ದಸರಾ ಉದ್ಘಾಟನೆ ಮಾಡುತ್ತಿರುವುದನ್ನು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ವಿರೋಧದ ಕುರಿತು ಪ್ರತಿಕ್ರಿಸಿದ ಬಾನು ಮುಷ್ತಾಕ್ ಅವರು, ನಾನು ರಾಜ್ಯದಲ್ಲಿರುವ ಕೋಟಿಗಟ್ಟಲೆ ಜನರ ಪ್ರೀತಿ, ವಿಶ್ವಾಸವನ್ನು ಗಳಿಸಿದ್ದೇನೆ. ಹಾಗಾಗಿ ಯಾರು ನನ್ನ ಬಗ್ಗೆ ಕೇವಲವಾಗಿ ಮಾತನಾಡಿದರೆ ಅದಕ್ಕೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದ್ದಾರೆ. ಕೋಟಿ ಕನ್ನಡಿಗರ ಪ್ರೀತಿಯ ಮುಂದೆ ಒಂದಿಬ್ಬರ ಟೀಕೆ ಲೆಕ್ಕಕ್ಕಿಲ್ಲ.
ಲಕ್ಷಾಂತರ ಜನರು ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಹೀಗಾಗಿ ಕೆಲವರ ವಿರೋಧ ಹಾಗೂ ಪ್ರತಿಕ್ರಿಯೆಗಳಿಗೆ ಉತ್ತರಿಸುವ ಅಗತ್ಯವಿಲ್ಲ ಎಂದು ಬೂಕರ್ ಪ್ರಶಸ್ತಿ ವಿಜೇತ ಲೇಖಕಿ, ಮೈಸೂರು ದಸರಾ ಉದ್ಘಾಟನೆಗೆ ಆಹ್ವಾನಿತೆ ಬಾನು ಮುಷ್ತಾಕ್ ಹೇಳಿದ್ದಾರೆ. ಇದನ್ನೂ ಓದಿ: ಅರಿಶಿನ, ಕುಂಕುಮ ಬಗ್ಗೆ ಯಾಕೆ ಬಾನು ಮುಷ್ತಾಕ್ಗೆ ತಕರಾರು, ಕಿರಿಕಿರಿ ಇದೆ?: ಪ್ರತಾಪ್ ಸಿಂಹ
ಪ್ರಸಕ್ತ ಸಾಲಿನ ದಸರಾ ಉತ್ಸವವನ್ನು ಉದ್ಘಾಟಿಸಲು ರಾಜ್ಯ ಸರ್ಕಾರ ತಮ್ಮನ್ನು ಆಹ್ವಾನಿಸಿದ್ದನ್ನು ವಿರೋಧ ಪಕ್ಷಗಳು ಟೀಕಿಸುತ್ತಿರುವುದಕ್ಕೆ ಬಾನು ಮುಷ್ತಾಕ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
2023ರಲ್ಲಿ ಹಾವೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಮಾನಾಂತರವಾದ ಜನ ಸಾಹಿತ್ಯ ಸಮ್ಮೇಳನದಲ್ಲಿ ಮಾಡಿದ ಭಾಷಣ ಕುರಿತು ಮಾತನಾಡಿ, ನನ್ನ ಭಾಷಣವನ್ನು ತಿರುಚಲಾಗಿದ್ದು, ನನ್ನ ವರ್ಚಸ್ಸಿಗೆ ಧಕ್ಕೆ ತರಲು ಸಾಮಾಜಿಕ ಜಾಲಜಾಣಗಳಲ್ಲಿ ತಿರುಚಿದ ವೀಡಿಯೋಗಳನ್ನು ಹಂಚಲಾಗಿದೆ. ಸಮ್ಮೇಳನದಲ್ಲಿ ನಾನು ಮುಸ್ಲಿಮರು, ದಲಿತರು, ಮಹಿಳೆಯರು ಮತ್ತು ದೀನದಲಿತ ಬರಹಗಾರರ ನಿರ್ಲಕ್ಷ್ಯದ ಬಗ್ಗೆ ನಾನು ಮಾತನಾಡಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.
