ಬೆಂಗಳೂರು: ಮೈಸೂರು ಸ್ಯಾಂಡಲ್ ಸೋಪ್ ಗೆ ಬೇರೆ ರಾಜ್ಯದ ನಟಿ ತಮನ್ನಾ ಭಾಟಿಯಾ ಅವರು ರಾಯಭಾರಿಯನ್ನಾಗಿ ನೇಮಕ ಮಾಡಿಕೊಂಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯದಲ್ಲಿ ಕನ್ನಡ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸುವುದರ ಜೊತೆಗೆ ಕನ್ನಡ ಚಿತ್ರರಂಗದ ನಟಿಯರು ಕೂಡ ಆಕ್ರೋಶ ಹೊರಹಾಕುತ್ತಿದ್ದಾರೆ.
ಇನ್ನು ಈ ಕುರಿತು ಮೋಹಕ ತಾರೆ ರಮ್ಯಾ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೋರಿ ಹಾಕುವ ಮೂಲಕ ಆಕ್ರೋಶ ಅವರ ಹಾಕಿದ್ದಾರೆ.
ಇಂದು ಒಂದು ವಸ್ತುವನ್ನು ಮಾರುಕಟ್ಟೆಯಲ್ಲಿ ಪ್ರಚಾರ ಮಾಡಲು ಹತ್ತಾರು ದಾರಿಗಳಿರುತ್ತವೆ. ರಾಯಭಾರಿ ನೇಮಕ ಮಾಡಿ ಪ್ರಚಾರ ಮಾಡುವ ಅಗತ್ಯವಿಲ್ಲ. ಇದು ತೆರಿಗೆ ಪಾವತಿದಾರರ ಹಣ ದುರುಪಯೋಗವಷ್ಟೆ ಹೊರತು ಏನೂ ಪ್ರಯೋಜನವಿಲ್ಲ. ಇಂದು ಸೆಲೆಬ್ರಿಟಿಗಳು ಬಳಸುತ್ತಾರೆ ಎಂಬ ಮಾತ್ರಕ್ಕೆ ಜನರು ವಸ್ತುಗಳನ್ನು ಖರೀದಿಸುವುದಿಲ್ಲ. ನಾವು ಸೋಪ್ ಬಳಸಿದರೆ ನಟಿಯ ರೀತಿ ಆಗುವುದಿಲ್ಲ ಎಂಬುದು ಜನತೆಗೆ ಚೆನ್ನಾಗಿ ಗೊತ್ತಿದೆ. ಜನರು ಅದನ್ನು ಮೆಚ್ಚಿ ಖರೀದಿಸಿ ಬಳಸಬೇಕೆಂದರೆ ವಸ್ತುವಿನ ಗುಣಮಟ್ಟವಿರಬೇಕು. ಇದನ್ನೂ ಓದಿ: ಮೈಸೂರು ಸ್ಯಾಂಡಲ್ ಸೋಪ್ ಗೆ ತಮನ್ನಾ ರಾಯಭಾರಿಯಾಗಿ: ವಿವಾದಕ್ಕೆ ಸ್ಪಷ್ಟನೆ ಕೊಟ್ಟ MB ಪಾಟೀಲ್
ಕರ್ನಾಟಕದಲ್ಲಿ ಮೈಸೂರು ಸ್ಯಾಂಡಲ್ ಸೋಪ್ಗೆ ದೀರ್ಘ ಇತಿಹಾಸವಿದೆ. ಪರಂಪರೆಯಿದೆ. ಪ್ರತಿ ಕನ್ನಡಿಗರು ಅದರ ರಾಯಭಾರಿಗಳು. ಮೈಸೂರು ಸ್ಯಾಂಡಲ್ ಸೋಪ್ ಅನ್ನು ಜಗತ್ತಿಗೆ ಪರಿಚಯಿಸಲು ಪ್ರತಿಯೊಬ್ಬರನ್ನೂ ಒಗ್ಗೂಡಿಸಿ. ಅದನ್ನು ಕನ್ನಡಿಗರು ಪ್ರೀತಿಯಿಂದ ಖುಷಿಯಿಂದ ಮಾಡುತ್ತಾರೆ. ಸಂಘಟಿತವಾಗಿ, ಸೃಜನಶೀಲವಾಗಿ ಗ್ರಾಹಕರೊಂದಿಗೆ ಸಂಬಂಧ ಹೊಂದುವುದು ಮುಖ್ಯವಾಗುತ್ತದೆ. ಆಪಲ್ ಬಹಳ ಯಶಸ್ವಿ ಉದ್ಯಮವಾಗಿ ಬೆಳೆದಿದೆ, ಆದರೆ ಅದಕ್ಕೆ ಸಂಭಾವನೆ ನೀಡಿ ನೇಮಿಸಿದ ಬ್ರಾಂಡ್ ಅಂಬಾಸಿಡರ್ ಇರಲಿಲ್ಲ ಎಂದು ಕೂಡ ನಟಿ ರಮ್ಯಾ ಖಂಡನೆ ವ್ಯಕ್ತಪಡಿಸಿದ್ದಾರೆ.
