ಜಪಾನ್: ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ವೈಜ್ಞಾನಿಕ ಮತ್ತು ಸುಸ್ಥಿರ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕರ್ನಾಟಕ ನಿಯೋಗವು ಮಂಗಳವಾರ ಜಪಾನ್‌ನ ಓಸಾಕಾದಲ್ಲಿರುವ ಮೈಶಿಮಾ ತ್ಯಾಜ್ಯ ದಹನ ಘಟಕಕ್ಕೆ ಭೇಟಿ ನೀಡಿ ಅದರ ಕಾರ್ಯವೈಖರಿಯನ್ನು ಪರಿಶೀಲಿಸಿತು.
ಈ ಭೇಟಿಯ ಮುಖ್ಯ ಉದ್ದೇಶ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸುವುದರ ಜೊತೆಗೆ ಅದರಿಂದ ವಿದ್ಯುತ್ ಉತ್ಪಾದಿಸುವ ಆಧುನಿಕ ತಂತ್ರಜ್ಞಾನ ಮತ್ತು ಜಾಗತಿಕ ಮಟ್ಟದ ವ್ಯವಸ್ಥೆಗಳನ್ನು ಅಧ್ಯಯನ ಮಾಡುವುದಾಗಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
2001ರಿಂದ ಕಾರ್ಯನಿರ್ವಹಿಸುತ್ತಿರುವ ಮೈಶಿಮಾ ಘಟಕವು ಪ್ರತಿದಿನ ಗರಿಷ್ಠ 900 ಟನ್ ಪುರಸಭೆ ಘನ ತ್ಯಾಜ್ಯವನ್ನು ಸಂಸ್ಕರಿಸುವ ಸಾಮರ್ಥ್ಯ ಹೊಂದಿದೆ. ಈ ಪ್ರಕ್ರಿಯೆಯ ಮೂಲಕ ಸುಮಾರು 32 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತದೆ. ಘಟಕವು ತನ್ನ ಕಾರ್ಯಾಚರಣೆಗೆ ಅಗತ್ಯವಿರುವ ವಿದ್ಯುತ್ತನ್ನು ಸ್ವತಃ ಬಳಸಿಕೊಳ್ಳುವುದರ ಜೊತೆಗೆ ಹೆಚ್ಚುವರಿ ವಿದ್ಯುತ್ತನ್ನು ಮುಖ್ಯ ವಿದ್ಯುತ್ ಜಾಲಕ್ಕೆ ಪೂರೈಸುತ್ತದೆ.
ಅತ್ಯಾಧುನಿಕ ದಹನ ತಂತ್ರಜ್ಞಾನ ಮತ್ತು ಮಾಲಿನ್ಯ ನಿಯಂತ್ರಣ ವ್ಯವಸ್ಥೆಗಳನ್ನು ಅಳವಡಿಸಿಕೊಂಡಿರುವ ಈ ಘಟಕವು ಪರಿಸರದ ಮೇಲಿನ ದುಷ್ಪರಿಣಾಮವನ್ನು ಕಡಿಮೆ ಮಾಡುವಲ್ಲಿ ಗಮನಾರ್ಹ ಸಾಧನೆ ಮಾಡಿದೆ.
ಮೈಶಿಮಾ ಘಟಕವು ತಂತ್ರಜ್ಞಾನದ ಜೊತೆಗೆ ತನ್ನ ವಿಶಿಷ್ಟ ವಾಸ್ತುಶಿಲ್ಪದ ಮೂಲಕವೂ ವಿಶ್ವದ ಗಮನ ಸೆಳೆದಿದೆ. ಆಸ್ಟ್ರಿಯಾದ ಖ್ಯಾತ ಕಲಾವಿದ ಫ್ರೀಡೆನ್ಸ್‌ರೈಕ್ ಹಂಡರ್ಟ್‌ವಾಸರ್ ಅವರ ವಿನ್ಯಾಸ ಪರಿಕಲ್ಪನೆಯಲ್ಲಿ ನಿರ್ಮಾಣಗೊಂಡಿರುವ ಕಟ್ಟಡವು ವರ್ಣರಂಜಿತ ಹೊರನೋಟ, ಹಸಿರು ಪರಿಸರ ಮತ್ತು ಕಲಾತ್ಮಕ ವಿನ್ಯಾಸದಿಂದ ಆಕರ್ಷಿಸುತ್ತದೆ. ಕೈಗಾರಿಕಾ ಮೂಲಸೌಕರ್ಯವನ್ನೂ ಪರಿಸರ ಸ್ನೇಹಿ ಹಾಗೂ ಸುಂದರ ತಾಣವನ್ನಾಗಿ ರೂಪಿಸಬಹುದು ಎಂಬುದಕ್ಕೆ ಇದು ಉತ್ತಮ ಉದಾಹರಣೆಯಾಗಿದೆ.
ಜಾಗತಿಕ ಮಟ್ಟದಲ್ಲಿ ಯಶಸ್ವಿಯಾಗಿರುವ ಇಂತಹ ಮಾದರಿಗಳನ್ನು ಕರ್ನಾಟಕದಲ್ಲಿಯೂ ಅಳವಡಿಸಿಕೊಳ್ಳುವ ಸಾಧ್ಯತೆಗಳನ್ನು ಸರ್ಕಾರ ಪರಿಶೀಲಿಸಲಿದೆ ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟರು.
ವೈಜ್ಞಾನಿಕ ತ್ಯಾಜ್ಯ ನಿರ್ವಹಣೆ, ತ್ಯಾಜ್ಯದಿಂದ ಇಂಧನ ಉತ್ಪಾದನೆ ಮತ್ತು ಆಧುನಿಕ ನಗರ ಮೂಲಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ರಾಜ್ಯದಲ್ಲಿ ಸ್ವಚ್ಛ, ಸುಸ್ಥಿರ ಹಾಗೂ ವಾಸಯೋಗ್ಯ ನಗರಗಳನ್ನು ನಿರ್ಮಿಸುವುದು ಸರ್ಕಾರದ ಗುರಿಯಾಗಿದೆ ಎಂದು ಅವರು ತಿಳಿಸಿದರು.
