ಬಳ್ಳಾರಿ: ಭಾರತವು ಸ್ವಾತಂತ್ರ್ಯದ 100 ವರ್ಷಗಳನ್ನು ಪೂರೈಸುವ 2047ರ ವೇಳೆಗೆ, ಯುವ ಜನತೆ ದೇಶವನ್ನು ವಿಕಸಿತ ಭಾರತವನ್ನಾಗಿ ನಿರ್ಮಿಸುವ ಮಹಾಸಂಕಲ್ಪದಲ್ಲಿ ಪಾಲ್ಗೊಳ್ಳಬೇಕು ಎಂದು ಕರ್ನಾಟಕ ರಾಜ್ಯದ ರಾಜ್ಯಪಾಲರಾದ ಡಾ. ಸುಧಾ ಯಾದವ್ ಅವರು ಕರೆ ನೀಡಿದರು.
ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಬಯಲು ರಂಗಮಂದಿರ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ 2024-25ನೇ ಸಾಲಿನ 14ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ವಿಶ್ವವಿದ್ಯಾಲಯವು ಕೇವಲ ಇಟ್ಟಿಗೆ ಮತ್ತು ಕಲ್ಲುಗಳಿಂದ ನಿರ್ಮಿತವಾದ ಕಟ್ಟಡವಲ್ಲ, ಬದಲಿಗೆ ಮಹಾನ್ ಸಾಮ್ರಾಟ್ ರಾಜ ಕೃಷ್ಣದೇವರಾಯರು ಕಲೆ, ಸಾಹಿತ್ಯ, ವಾಸ್ತುಶಿಲ್ಪ ಹಾಗೂ ಲೋಕಕಲ್ಯಾಣದ ಸ್ವರ್ಣಯುಗವನ್ನು ಸೃಷ್ಟಿಸಿದ ಐತಿಹಾಸಿಕ ಮತ್ತು ಗೌರವಶಾಲಿ ನೆಲದಲ್ಲಿದೆ. 2010ರಲ್ಲಿ ತನ್ನ ಸ್ಥಾಪನೆಯಾದಾಗಿನಿಂದ ಈ ವಿಶ್ವವಿದ್ಯಾಲಯವು ಕಡಿಮೆ ಸಮಯದಲ್ಲಿ ಉನ್ನತ ಸಾಧನೆಗಳನ್ನು ಮಾಡಿದೆ ಎಂದು ಹೇಳಿದರು.
ಲೋಕಭವನ ಕರ್ನಾಟಕದ ಯತ್ನದ ಮೇರೆಗೆ ಕೆ.ಕೆ.ಆರ್.ಡಿ.ಬಿ. ಯಿಂದ ಹಂಚಿಕೆ ಮಾಡಲಾದ 42 ಕೋಟಿ ರೂ. ಅನುದಾನದೊಂದಿಗೆ ಡಿಜಿಟಲ್ ಆಧಾರಭೂತ ರಾಜ್ಯದ ವಿಸ್ತರಣೆ ಕಾರ್ಯ ನಡೆಯುತ್ತಿದೆ.
ಗ್ರೀನ್ ಕ್ಯಾಂಪಸ್ , ಕೃತಕ ಬುದ್ಧಿಮತ್ತೆನಂತಹ ಆಧುನಿಕ ಪಠ್ಯಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆ.
ತೃತೀಯ ಲಿಂಗಿಗಳ ಸಮುದಾಯ ಹಾಗೂ ಸ್ವಚ್ಛತಾ ಕಾರ್ಮಿಕರ ಮಕ್ಕಳಿಗಾಗಿ ಉಚಿತ ಶಿಕ್ಷಣ ಮತ್ತು ವಿದ್ಯಾರ್ಥಿವೇತನ ನೀಡುವ ಮೂಲಕ ವಿಶ್ವವಿದ್ಯಾಲಯವು ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ನೈಜ ನಿದರ್ಶನವಾಗಿದೆ ಎಂದರು.
ವಿದ್ಯಾರ್ಥಿಗಳ ಕೈಯಲ್ಲಿರುವ ಡಿಗ್ರಿ ಕೇವಲ ಕಾಗದದ ತುಂಡಲ್ಲ, ಅದು ಅವರ ಪರಿಶ್ರಮದ ಪ್ರಮಾಣ ಹಾಗೂ ಸಮಾಜದ ಮೇಲಿನ ಜವಾಬ್ದಾರಿಯ ಪಾಸ್ಪೋರ್ಟ್ ಆಗಿದೆ. ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಮಾತುಗಳಂತೆ, ಶಿಕ್ಷಣದ ಮೂಲಕ ಮಾತ್ರ ಮನುಷ್ಯನ ಮೆದುಳಿನ ಸದುಪಯೋಗ ಮಾಡಲು ಸಾಧ್ಯ. ಸ್ವಾಮಿ ವಿವೇಕಾನಂದರ ಸ್ಪಷ್ಟ ಸಂದೇಶದಂತೆ ಚರಿತ್ರೆ, ಮಾನಸಿಕ ವಿಕಾಸ, ಮತ್ತು ಬುದ್ಧಿಯ ವಿಕಾಸವನ್ನುಂಟುಮಾಡುವ ಶಿಕ್ಷಣ ನಮಗೆ ಅಗತ್ಯವಿದೆ. ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಯುವಕರಿಗೆ “ಕನಸುಗಳು ಎಂದರೆ ರಾತ್ರಿ ಮಲಗಿದಾಗ ಕಾಣುವುದಲ್ಲ, ಅವು ನಮಗೆ ನಿದ್ರೆಯನ್ನೇ ಮಾಡದಂತೆ ಮಾಡುವುದು” ಎಂದು ಬೋಧಿಸಿದ್ದಾರೆ ಎಂದರು.
ಯುವ ಸಮುದಾಯಕ್ಕೆ ಪಂಚ ಸಂಕಲ್ಪಗಳ ಆಹ್ವಾನ:
ಯುವಜನರಿಗೆ ಐದು ಪ್ರಮುಖ ಸಂಕಲ್ಪಗಳನ್ನು ಕೈಗೊಳ್ಳುವಂತೆ ಕರೆ ನೀಡಿದ ರಾಜ್ಯಪಾಲರಾದ ಡಾ.ಸುಧಾ ಯಾದವ್ ಅವರು, ಉದ್ಯೋಗಾಕಾಂಕ್ಷಿಗಳಾಗದೆ ತಮ್ಮ ಪ್ರತಿಭೆಯಿಂದ ಹೊಸ ಸ್ಟಾರ್ಟ್ಅಪ್ಗಳು ಮತ್ತು ನಾವೀನ್ಯತೆಗಳಿಗೆ ಅವಕಾಶ ಕಲ್ಪಿಸಬೇಕು. ನಶಾ ಮುಕ್ತ ಕರ್ನಾಟಕ ಮತ್ತು ನಶಾ ಮುಕ್ತ ಭಾರತದ ಧ್ವಜವಾಹಕರಾಗಿ, ಯಾವುದೇ ರೀತಿಯ ನಶೆ ಮತ್ತು ವ್ಯಸನಗಳಿಂದ ದೂರವಿರಿ. ತಂತ್ರಜ್ಞಾನವು ವೇಗವಾಗಿ ಬದಲಾಗುತ್ತಿದ್ದು, ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ಯುಗದಲ್ಲಿ ನಿರಂತರವಾಗಿ ಕಲಿಯುವ ಹಂಬಲವಿಟ್ಟುಕೊಳ್ಳಿ. ಪರಿಸರ ಅಸಮತೋಲನ ಇಂದಿನ ದೊಡ್ಡ ಸವಾಲಾಗಿದ್ದು, ‘ಒಂದು ಮರ – ತಾಯಿ’ ಎಂಬ ಭಾವನೆಯೊಂದಿಗೆ ಪ್ರಕೃತಿಯ ಸಂರಕ್ಷಣೆ ಮತ್ತು ಸ್ವಚ್ಛತೆಯನ್ನು ಜೀವನಶೈಲಿಯಾಗಿಸಿಕೊಳ್ಳಿ ಎಂದು ತಿಳಿಸಿದರು.
ಇದೇ ವೇಳೆ ರಾಜ್ಯಪಾಲರು, ‘ನಶಾ ಮುಕ್ತ ಭಾರತ ಪ್ರತಿಜ್ಞೆ’ ಬೋಧಿಸಿದರು
ಮೂವರಿಗೆ ಗೌರವ ಡಾಕ್ಟರೇಟ್ ಪುರಸ್ಕಾರ:
ಈ ಬಾರಿಯ ಘಟಿಕೋತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಮೂವರು ಸಾಧಕ ಮಹನೀಯರಿಗೆ ಗೌರವಾನ್ವಿತ ರಾಜ್ಯಪಾಲರು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದರು.
ಡಾ. ಹೆನ್ರಿ ಡಿಸೋಜಾ: ಶಿಕ್ಷಣ ಮತ್ತು ಸಮಾಜಸೇವಾ ಕ್ಷೇತ್ರಕ್ಕಾಗಿ (ಬಳ್ಳಾರಿ ಧರ್ಮಪ್ರಾಂತ್ಯದ ಬಿಷಪ್).
ಚನ್ನಬಸವಣ್ಣ ಸಿ. (‘ಲೋಹಿಯಾ ಚನ್ನಬಸವಣ್ಣ’): ಸಾಹಿತ್ಯ, ಪರಿಸರ ಮತ್ತು ಸಮಾಜಸೇವಾ ಸಾಧನೆಗಾಗಿ.
ಗೀತಾ ನಾಗಪಾಲ್: ಶಿಕ್ಷಣ, ಕಲೆ ಮತ್ತು ಸಮಾಜಸೇವೆ ಹಾಗೂ ಕೃಪಾನಿಧಿ ಶಿಕ್ಷಣ ಸಂಸ್ಥೆಗಳ ಸಹಸಂಸ್ಥಾಪಕರಾಗಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಈ ಗೌರವ ನೀಡಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಮತ್ತು ಒಡಿಶಾ ಉಚ್ಚ ನ್ಯಾಯಾಲಯಗಳ ನಿವೃತ್ತ ನ್ಯಾಯಾಧೀಶರಾದ ನ್ಯಾಯಮೂರ್ತಿ ಡಾ. ಕೃಷ್ಣ ಎಸ್. ದೀಕ್ಷಿತ್, ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ. ಮುನಿರಾಜು, ಕುಲಸಚಿವ ಪ್ರೊ. ವಿ. ಲೋಕೇಶ್ ಹಾಗೂ ಮೌಲ್ಯಮಾಪನ ಕುಲಸಚಿವ ಪ್ರೊ. ಪಿ. ಕಣ್ಣನ್ ಸೇರಿದಂತೆ ವಿವಿಯ ಎಲ್ಲಾ ನಿಕಾಯಗಳ ಡೀನರು, ಮುಖ್ಯಸ್ಥರು, ವಿವಿಧ ಮಹಾವಿದ್ಯಾಲಯದ ಪ್ರಾಂಶುಪಾಲರು, ಬೋಧಕ- ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.
