ಬೆಂಗಳೂರು: ಕರ್ನಾಟಕ ಸರ್ಕಾರವು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ 71 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಿದೆ. ಜಾನಪದ, ಸಂಗೀತ, ನೃತ್ಯ, ಚಲನಚಿತ್ರ, ರಂಗಭೂಮಿ, ಶಿಲ್ಪಕಲೆ, ಚಿತ್ರಕಲೆ, ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನ, ಸಮಾಜ ಸೇವೆ, ವೈದ್ಯಕೀಯ, ಸಾಹಿತ್ಯ, ಶಿಕ್ಷಣ, ಕ್ರೀಡೆ ಸೇರಿದಂತೆ ಹಲವು ಕ್ಷೇತ್ರಗಳ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಜಾನಪದ ಕ್ಷೇತ್ರದಲ್ಲಿ ದಾವಲಸಾಬ ಅತ್ತಾರ, ಗೌರಮ್ಮ, ಪಾಂಡಪ್ಪ ದೇವಲಪ್ಪ ಲಮಾಣಿ, ಎ.ಆರ್. ಸತ್ಯನಾರಾಯಣ, ಈರಣ್ಣ ರುದ್ರಾಕ್ಷಿ, ಶಿವಲಿಂಗಪ್ಪ ಹಾಗೂ ಸುರೇಶ್ ರಾಮಚಂದ್ರ ಜೋಶಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸಂಗೀತ ಕ್ಷೇತ್ರದಲ್ಲಿ ಡಾ. ಸಿ.ಎ. ಶ್ರೀಧರ್, ಡಾ. ಎ. ನಾರಾಯಣ ಸ್ವಾಮಿ ಹಾಗೂ ಬಿ. ಮುರುಳಿ, ನೃತ್ಯ ಕ್ಷೇತ್ರದಲ್ಲಿ ಡಾ. ಸತ್ಯನಾರಾಯಣ ರಾಜು, ಚಲನಚಿತ್ರ ಕ್ಷೇತ್ರದಲ್ಲಿ ಬಾಬಜೀ ವೆಂಕಟರಮಣ ಹಾಗೂ ಅಶೋಕ್ ಅವರಿಗೆ ಪ್ರಶಸ್ತಿ ಲಭಿಸಿದೆ.
ರಂಗಭೂಮಿ ಕ್ಷೇತ್ರದಲ್ಲಿ ಡಿ. ಕೆಂಪಣ್ಣ, ಕೆ. ಜಯಲಕ್ಷ್ಮಿ ಪಾಟೀಲ್, ಜಿ.ಡಿ. ತಿಮ್ಮಯ್ಯ, ಕೆ.ಆರ್. ಸುಮತಿ, ಹೆಚ್.ವಿ. ಪುಟ್ಟವೀರಪ್ಪ ಹಾಗೂ ಹೊನ್ನ ನಾಯಕ್ ಅವರನ್ನು ಆಯ್ಕೆ ಮಾಡಲಾಗಿದೆ. ಯಕ್ಷಗಾನ ಕ್ಷೇತ್ರದಲ್ಲಿ ಗೋಪಾಲ ಗಾಣಿಗ ಮತ್ತು ಬಯಲಾಟ ಕ್ಷೇತ್ರದಲ್ಲಿ ಹುಲಿಗೆಮ್ಮ ಅವರಿಗೆ ಪ್ರಶಸ್ತಿ ಘೋಷಿಸಲಾಗಿದೆ.
ಸಮಾಜ ಸೇವಾ ಕ್ಷೇತ್ರದಲ್ಲಿ ಜಗದ್ಗುರು ಡಾ. ಅನ್ನದಾನೀಶ್ವರ ಮಹಾಶಿವಯೋಗಿ, ಬಸವರಾಜು, ಕಾಗೋಡು ತಿಮ್ಮಪ್ಪ, ಡಾ. ಎಸ್.ಎಂ. ಎಲಿ, ಡಾ. ಜಿ.ಎಸ್. ಚಂದ್ರಶೇಖರ್, ಡಾ. ಶಿವಾನಂದ ಮಹಾಸ್ವಾಮಿ ಸೇರಿದಂತೆ ಹಲವು ಸಾಧಕರಿಗೆ ಗೌರವ ಸಂದಿದೆ.
ಸಾಹಿತ್ಯ ಕ್ಷೇತ್ರದಲ್ಲಿ ಡಾ. ಇಂದಿರಾ ಹೆಗಡೆ, ವೀರಹನುಮಾನ್, ಪ್ರೊ. ನಾರಾಯಣಘಟ್ಟ, ಸಿ. ಮಹೇಶ್ವರಪ್ಪ ಚಟ್ನಳ್ಳಿ, ಡಾ. ಕರೀಗೌಡ ಬೀಚನಹಳ್ಳಿ ಹಾಗೂ ಡಾ. ಸಿದ್ಧರಾಮ ಹೊನ್ಕಲ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ವೈದ್ಯಕೀಯ ಕ್ಷೇತ್ರದಲ್ಲಿ ಡಾ. ವಿಜಯೇಂದ್ರ ಹೊನ್ನೂರಪ್ಪ ಹಾಗೂ ಡಾ. ಸುಜಾತ ಮಲ್ಲಿಕಾರ್ಜುನ ಜಾಲಿ, ಶಿಕ್ಷಣ ಕ್ಷೇತ್ರದಲ್ಲಿ ಫಾ. ಜೊಸೆಫ್, ಶಾಂತಪ್ಪ ದಶವಂತ, ಸಂಗೀತಾ ಎನ್. ಕಟ್ಟಿಮನಿ ಹಾಗೂ ಡಾ. ಎನ್.ಎಸ್. ರಂಗರಾಜು ಅವರಿಗೆ ಪ್ರಶಸ್ತಿ ಲಭಿಸಿದೆ.
ಇನ್ನು ಕೃಷಿ, ಪರಿಸರ, ವಿಜ್ಞಾನ ಮತ್ತು ತಂತ್ರಜ್ಞಾನ, ಮಾಧ್ಯಮ, ಆಡಳಿತ, ಇಂಜಿನಿಯರಿಂಗ್, ನ್ಯಾಯಾಂಗ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿಯೂ ಸಾಧಕರನ್ನು ಗುರುತಿಸಿ ಪ್ರಶಸ್ತಿ ಘೋಷಿಸಲಾಗಿದೆ.
ಒಟ್ಟಾರೆ, ರಾಜ್ಯದ ವಿವಿಧ ಜಿಲ್ಲೆಗಳು ಮಾತ್ರವಲ್ಲದೆ ಹೊರನಾಡು ಹಾಗೂ ಹೊರದೇಶಗಳಲ್ಲಿ ಕನ್ನಡ ನಾಡು, ನುಡಿ ಮತ್ತು ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಕೊಡುಗೆ ನೀಡಿದ ಸಾಧಕರನ್ನೂ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ವಿಶೇಷವಾಗಿದೆ.
