ಶಹಾಪುರ: ಹಳೆಯ ಪಕ್ಷದ ಗುಲಾಮಗಿರಿಯಿಂದ ತೊರೆದು ಇಂದು ೩೦೦ಕ್ಕೂ ಹೆಚ್ಚು ಕಾರ್ಯಕರ್ತರನ್ನೊಳಗೊಂಡು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದೇನೆ ಎಂದು ಹಿರಿಯ ದಲಿತ ಮುಖಂಡ ಮಲ್ಲಿಕಾರ್ಜುನ ಪೂಜಾರಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಸುಮಾರು 20 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ನಿಯತ್ತಿನಿಂದ ನನ್ನ ಕರ್ತವ್ಯ ನಿಭಾಯಿಸಿದ್ದೇನೆ. ಕಾಂಗ್ರೆಸ್ ಪಕ್ಷವು ಬಿಜೆಪಿಯನ್ನು ಸನಾತನ ಮತ್ತು ಮನುವಾದಿ ಪಕ್ಷವೆಂದು ಬಿಂಬಿಸುವಲ್ಲಿ ಯಶಸ್ವಿಯಾಗಿ, ತನ್ನ ನಿಜವಾದ ಆಂತರಿಕ ಸತ್ಯ ಸವರ್ಣೀಯ ಶೋಷಣೆಯನ್ನು ದರ್ಪ, ಅಸಮಾನತೆಯನ್ನು ತನ್ನೊಳಗೆ ಸೂಕ್ಷö್ಮವಾಗಿಟ್ಟುಕೊಂಡು ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಯಶಸ್ವಿಯಾಗಿದೆ. ಸಂವೀಧಾನ ಮತ್ತು ಸಮಾನತೆ ಎಂಬ ಮೋಸದ ಮುಖವಾಡವನ್ನು ಅತ್ಯುತ್ತಮವಾಗಿ ಕಾಪಾಡಿಕೊಂಡಿದ್ದಾರೆ. ಬಿಜೆಪಿಯವರನ್ನು ಅಂಧ ಭಕ್ತರು ಎಂದು ಹೇಳುವ ಕಾಂಗ್ರೆಸ್‌ನವರು ತಾವು ಆಧುನಿಕ ಗುಲಾಮರಾಗಿ ಉಳಿದಿದ್ದಾರೆ.
40 ವರ್ಷದಿಂದ ಹೋರಾಟವೇ ಉಸಿರಾಗಿಸಿಕೊಂಡು, ಜೀವನವೇ ಸಮಾಜದ ಒಳಿತಿಗಾಗಿ ಮುಡಿಪಾಗಿಟ್ಟಿದ್ದೇನೆ. ನನ್ನ ಜೀವನ ತೆರೆದ ಪುಸ್ತಕ ಡಾ.ಬಿ.ಆರ್ ಅಂಬೇಡ್ಕರ್ ಹಾಗೂ ಭಗವಾನ್ ಬುದ್ಧರ ಆದರ್ಶವನ್ನಿಟ್ಟುಕೊಂಡು ಸಿದ್ಧಾಂತಕ್ಕೆ ಬದ್ಧನಾಗಿ ಸತ್ಯ, ಸಮಾನತೆ ಹಾಗೂ ಸಮಾಜದ ರಕ್ಷಣೆಗಾಗಿ ಜೀವನವೇ ಮುಡಿಪಾಗಿಟ್ಟಿದ್ದೇನೆ. ಯಾವ ವೈಯಕ್ತಿಕ ಅಮಿಷಕ್ಕೆ ಮಣಿಯುವ ವ್ಯಕ್ತಿತ್ವ ನನ್ನದಲ್ಲ. ಯಾರ ಮೇಲೆಯೂ ನನಗೆ ವಯಕ್ತಿಕ ಅಸಮಾಧಾನವಿಲ್ಲ. ಆಧುನಿಕ ಗುಲಾಮನಾಗಿರುವುದಕ್ಕೆ ನನ್ನ ಸಿದ್ಧಾಂತ ಮತ್ತು ವ್ಯಕ್ತಿತ್ವ ಒಪ್ಪುತ್ತಿಲ್ಲ. ಹಾಗಾಗಿ ನಾನು ಬಿಜೆಪಿ ಪಕ್ಷ ಸೇರುತ್ತಿದ್ದೇನೆ. ಸಂವಿಧಾನದ ಮುಖವಾಡ ಧರಿಸಿದ ಸವರ್ಣೀಯ ಸಾರ್ವಾಧಿಕಾರಕ್ಕೆ ಗುಲಾಮನಾಗಿರಲು ನನ್ನಿಂದ ಸಾಧ್ಯವಿಲ್ಲ. ಕನಿಷ್ಠ ಸೈದ್ಧಾಂತಿಕ ಭರವಸೆ ನೀಡಿ ಪಕ್ಷಕ್ಕೆ ಆಹ್ವಾನಿಸಿದ ಬಿಜೆಪಿ ನಾಯಕರ ಕರೆಗೆ ಸಹಕರಿಸಿ ಬಿಜೆಪಿ ಪಕ್ಷ ಸೇರ್ಪಡೆಗೊಳ್ಳುತ್ತಿದ್ದೇನೆ.
ಬಿಜೆಪಿ ಪಕ್ಷದಲ್ಲೂ ನನ್ನ ಸಿದ್ಧಾಂತ ಹೋರಾಟ ಮತ್ತು ಆದರ್ಶ ಸದಾ ಹಿಗೇಯೇ ಮುಂದುವರೆಯುತ್ತದೆ ಎಂದು ತಿಳಿಸಿದ್ದಾರೆ.
