ನವದೆಹಲಿ: ಜಾಗತಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗ ಕಡಿತದ ಸರಣಿ ಮುಂದುವರಿದಿದ್ದು, ಇದೀಗ ಇ-ಕಾಮರ್ಸ್ ದೈತ್ಯ ಅಮೆಜಾನ್ ತನ್ನ ಸುಮಾರು 250 ಉದ್ಯೋಗಿಗಳನ್ನು ವಜಾಗೊಳಿಸಿದೆ. ಕಂಪನಿಯ ವಿವಿಧ ವಿಭಾಗಗಳಲ್ಲಿ ನಡೆದ ಈ ಕ್ರಮವು ಉದ್ಯೋಗಿಗಳಲ್ಲಿ ಆತಂಕ ಮೂಡಿಸಿದೆ.
ಡಿವೈಸಸ್ ವಿಭಾಗದಲ್ಲಿ ಉದ್ಯೋಗ ಕಡಿತ
ಅಮೆಜಾನ್‌ನ ಪ್ರಸಿದ್ಧ ಉತ್ಪನ್ನಗಳಾದ ಕಿಂಡಲ್ ಇ-ರೀಡರ್ ಮತ್ತು ಎಕೋ ಸ್ಮಾರ್ಟ್ ಸ್ಪೀಕರ್ ಸೇರಿದಂತೆ ಹಲವು ಸಾಧನಗಳ ಅಭಿವೃದ್ಧಿಯ ಹೊಣೆ ಹೊತ್ತಿರುವ ‘ಡಿವೈಸಸ್’ ವಿಭಾಗದಲ್ಲಿ ಈ ಉದ್ಯೋಗ ಕಡಿತ ನಡೆದಿದೆ. ಮುಖ್ಯವಾಗಿ ಸಾಫ್ಟ್‌ವೇರ್ ಅಭಿವೃದ್ಧಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉದ್ಯೋಗಿಗಳು ಇದರ ಪರಿಣಾಮ ಎದುರಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಮುಂಜಾನೆಯೇ ಇಮೇಲ್, ಎಸ್‌ಎಂಎಸ್ ಮೂಲಕ ಮಾಹಿತಿ
ಉದ್ಯೋಗ ಕಡಿತಕ್ಕೆ ಒಳಗಾದವರಿಗೆ ಮುಂಜಾನೆಯೇ ಇಮೇಲ್ ಹಾಗೂ ಮೊಬೈಲ್ ಸಂದೇಶಗಳ ಮೂಲಕ ವಜಾಗೊಳಿಸಿರುವ ಬಗ್ಗೆ ಮಾಹಿತಿ ನೀಡಲಾಗಿದೆ. ಈ ಹಿಂದೆ ಮೆಟಾ ಮತ್ತು ಒರಾಕಲ್ ಕಂಪನಿಗಳೂ ಇದೇ ರೀತಿಯಲ್ಲಿ ಉದ್ಯೋಗಿಗಳಿಗೆ ವಜಾ ಮಾಹಿತಿಯನ್ನು ತಲುಪಿಸಿದ್ದವು.
ಕಂಪನಿಯ ಸ್ಪಷ್ಟನೆ ಏನು?
ಅಮೆಜಾನ್ ಉಪಾಧ್ಯಕ್ಷೆ ಚೆರಿ ರಾಬಿನ್ಸನ್ ಅವರು ಉದ್ಯೋಗಿಗಳಿಗೆ ಕಳುಹಿಸಿದ ಇಮೇಲ್‌ನಲ್ಲಿ, ಕಂಪನಿಯ ಸಾಂಸ್ಥಿಕ ರಚನೆಯ ಸಮಗ್ರ ಪರಿಶೀಲನೆಯ ಬಳಿಕ ಭವಿಷ್ಯದ ಅಗತ್ಯಗಳಿಗೆ ಅನುಗುಣವಾಗಿ ಕೆಲವು ಹುದ್ದೆಗಳನ್ನು ಕಡಿತಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಕಂಪನಿಯ ವಕ್ತಾರರೂ ಉದ್ಯೋಗ ಕಡಿತವನ್ನು ದೃಢಪಡಿಸಿದ್ದಾರೆ. ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸುವುದು ಮತ್ತು ಭವಿಷ್ಯದ ಉತ್ಪನ್ನಗಳ ಅಭಿವೃದ್ಧಿಗೆ ವೇಗ ನೀಡುವುದು ಈ ನಿರ್ಧಾರದ ಉದ್ದೇಶ ಎಂದು ಅಮೆಜಾನ್ ಸ್ಪಷ್ಟಪಡಿಸಿದೆ. ತಂತ್ರಜ್ಞಾನ ವಲಯದಲ್ಲಿ ಉದ್ಯೋಗ ಭದ್ರತೆಯ ಕುರಿತ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.
