35 ಕೋಟಿ 70 ಲಕ್ಷ ರೂ. ಬಿಲ್ ಬಾಕಿ/ ದಿ. 16 ರಂದು ಹೋರಾಟದ ಎಚ್ಚರಿಕೆ
ಶಹಾಪುರ: ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ (ಕೆಬಿಜೆಎನ್‌ಎಲ್) ವ್ಯಾಪ್ತಿಯಲ್ಲಿ ಕೈಗೊಂಡಿರುವ ನೀರಾವರಿ ಹಾಗೂ ವಿವಿಧ ಕಾಮಗಾರಿಗಳ ಕೋಟ್ಯಂತರ ರೂಪಾಯಿ ಬಾಕಿ ಉಳಿಸಿಕೊಂಡಿದ್ದು ಕೂಡಲೇ ಬಿಲ್ ಪಾವತಿ ಮಾಡಬೇಕು ಎಂದು ಗುತ್ತಿಗೆದಾರರ ಸಂಘದ ತಾಲೂಕ ಅಧ್ಯಕ್ಷ ನಾನಾಗೌಡ ಎಮ್. ಬಿರದಾರ ಗಡುವು ನೀಡಿದ್ದು, ಬಾಕಿ ಬಿಲ್‌ನ್ನು ಅ.15ರ ಒಳಗಾಗಿ ಪಾವತಿಸದಿದ್ದರೆ ಅ.16 ರಂದು ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.
ಭೀಮರಾಯನಗುಡಿ ಕೆಬಿಜೆಎನ್‌ಎಲ್ ಕಚೇರಿಯ ಮುಖ್ಯ ಲೆಕ್ಕಾಧಿಕಾರಿಗಳ ಮೂಲಕ ಕೃಭಾಜನಿನಿ ವ್ಯವಸ್ಥಾಪಕ ನಿರ್ಧೇಶಕರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿ, ಕೆಬಿಜೆಎನ್‌ಎಲ್ ಭೀಮರಾಯನಗುಡಿ ವ್ಯಾಪ್ತಿಯಲ್ಲಿ ಸುಮಾರು 10 ಲಕ್ಷದ ಒಳಗಿನ ಮೊತ್ತದ ಕಾಮಗಾರಿಗಳ 597 ಬಿಲ್ ಇದ್ದು
23 ಕೋಟಿ 64 ಲಕ್ಷ ರೂ. ಬಾಕಿ ಇದೆ, 10 ಲಕ್ಷ ದಿಂದ 25 ಲಕ್ಷಗಳ ಮೊತ್ತದ ಒಳಗಿನ ಕಾಮಗಾರಿಗಳ 65 ಬಿಲ್‌ಗಳ ಕಾಮಗಾರಿಗೆ 8 ಕೋಟಿ 90 ಲಕ್ಷದ 40 ಸಾವಿರ, 25ಲಕ್ಷ ಮೊತ್ತ ಮೇಲ್ಪಟ್ಟ ಕಾಮಗಾರಿಗಳ 07 ಬಿಲ್‌ಗಳ 3 ಕೋಟಿ 15 ಲಕ್ಷದ ವೆಚ್ಚ ಒಟ್ಟು 669 ಬಿಲ್‌ಗಳ ಪೈಕಿ 35ಕೋಟಿ 70 ಲಕ್ಷ ರೂ. ಬಾಕಿ ಬಿಲ್ ಉಳಿಸಿಕೊಂಡಿದ್ದು, ಬಾಕಿ ಹಣ ಬಿಡುಗಡೆಗೆ ಒತ್ತಾಯಿಸಿ ಈಗಾಗಲೇ ಉನ್ನತ ಮಟ್ಟದ ಅಧಿಕಾರಿಗಳು ಹಾಗೂ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಕಳೆದ 2-3 ವರ್ಷಗಳಿಂದ ನೆನಗುದಿಗೆ ಬಿದ್ದಿರುವ ಈ ಬಾಕಿ ಬಿಲ್ಲುಗಳಿಂದಾಗಿ ಗುತ್ತಿಗೆದಾರರ ಕುಟುಂಬಗಳು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿವೆ.
ಈಗಾಗಲೇ ಬಾಕಿ ಬಿಲ್ ಪಾವತಿಗಾಗಿ ಗುತ್ತಿಗೆದಾರರು ಮನೆ, ಕಾರು, ಜಾಗಗಳನ್ನು ಮಾರಾಟ ಮಾಡಿ ದಿನಗೂಲಿ ಕೆಲಸಕ್ಕೆ ತೆರಳುವ ಪರಿಸ್ಥೀತಿಗೆ ತಲುಪಿದ್ದಾರೆ. ಇನ್ನೂ ಕೆಲವರು ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆಗಳಿಗೆ ಸೇರಿದ್ದಾರೆ. ಇದಕ್ಕೆ ಬಾಕಿ ಬಿಲ್ ಪಾವತಿಯೇ ಕಾರಣವಾಗಿದ್ದು, ಸರ್ಕಾರ ಮಾತ್ರ ಕ್ಯಾರೆ ಎನ್ನುತ್ತಿಲ್ಲಾ. ರಾಜ್ಯದ ಅನೇಕ ಕಡೆ ಗುತ್ತಿಗೆದಾರರು ಡೆತ್‌ನೋಟ್ ಬರೆದಿಟ್ಟು ಸಾವಿಗೆ ಶರಣಾಗುತ್ತಿದ್ದಾರೆ. ಆದರೂ ಸರ್ಕಾರಕ್ಕೆ ಕಿಂಚಿತ್ತು ಕರುಣೆಯೇ ಇಲ್ಲದಾಗಿದೆ. ಮಾನವೀಯತೆ ಕಳೆದುಕೊಂಡ ಸರ್ಕಾರ ಗುತ್ತಿಗೆದಾರರ ಜೀವ ಕಸೆದುಕೊಳ್ಳುತ್ತದೆಯೇ ಎಂಬ ಆತಂಕ ಗುತ್ತಿಗೆದಾರರಲ್ಲಿ ಶುರುವಾಗಿದೆ. ನಾವೇನೂ ನಿಮ್ಮ ಮನೆಯ ಆಸ್ತಿಯನ್ನು ಕೇಳುತ್ತಿಲ್ಲಾ. ನಾವು ಮಾಡಿದ ಕಾಮಗಾರಿಗೆ ಹಣ ಕೊಡಲು ಕೇಳುತ್ತಿದ್ದೇವೆ. ಆದರೆ ಮೀನಾಮೇಷ ಏಕೆ ಎಂಬುವುದು ತಿಳಿಯುತ್ತಿಲ್ಲಾ. ಅಭಿವೃದ್ಧಿ ಮತ್ತು ಗ್ಯಾರಂಟಿ ಹೆಸರಲ್ಲಿ ಸರ್ಕಾರ ಗುತ್ತಿಗೆದಾರರ ಜೀವ ಪಣಕ್ಕಿಡಲು ಹೊರಟಿದ್ದು ಇದಕ್ಕೆ ಸರ್ಕಾರವೆ ಕಾರಣ. ಅಕ್ಟೋಬರ್ 15 ರೊಳಗಾಗಿ ಬಾಕಿ ಬಿಲ್ ಪಾವತಿಸದಿದ್ದರೆ, 16 ರಂದು ಉಗ್ರವಾದ ಹೋರಾಟದ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಶಿವುಕುಮಾರ ಬಡಿಗೇರ, ರಾಜಕುಮಾರ ಆಂದೋಲ, ಅಯ್ಯಣಗೌಡ ಸಿದ್ಧಾಪುರ, ಭೀಮರೆಡ್ಡಿ ಹುಲ್ಕಲ್, ಮಾಳಪ್ಪ ಕವತಿ ಸೇರಿದಂತೆ ನೊಂದ ಗುತ್ತಿಗೆದಾರರು ಇದ್ದರು.
ಭೀಮರಾಯನಗುಡಿ ಕೆಬಿಜೆಎನ್‌ಎಲ್ ವ್ಯಾಪ್ತಿಯಲ್ಲಿ ಕೈಗೊಂಡಿರುವ ಕಾಮಗಾರಿಗಳ 35 ಕೋಟಿ ರೂ.ಅಧಿಕ ಬಿಲ್ ಬಾಕಿ ಇದ್ದು, ತಕ್ಷಣವೇ ಪಾವತಿಸಬೇಕು. ಇಲ್ಲದಿದ್ದರೆ ದಿ. 16 ರಂದು 10 ಗಂಟೆಗೆ ಕೆಬಿಜೆಎನ್‌ಎಲ್ ಕಛೇರಿ ಮುತ್ತಿಗೆ ಹಾಕಿ ಉಗ್ರವಾದ ಹೋರಾಟ ಮಾಡಲಾಗುವುದು . ಈಗಾಗಲೇ ಹೋರಾಟದ ಕುರಿತು ಆರಕ್ಷಕ ಉಪ ನಿರೀಕ್ಷಕರಿಗೂ ಮನವಿ ಮಾಡಲಾಗಿದೆ. ಹೋರಾಟದಲ್ಲಿ ಗುತ್ತಿಗೆದಾರರ ಜೀವಕ್ಕೆ ಏನಾದರೂ ಹಾನಿಯಾದರೆ ಅದಕ್ಕೆ ಸರ್ಕಾರವೇ ನೇರ ಕಾರಣ ಎಂದು ನಾನಾಗೌಡ ಎಂ ಬಿರಾದಾರ ಅಧ್ಯಕ್ಷರು. ಗುತ್ತಿಗೆದಾರರ ಸಂಘ ಭೀಮರಾಯನಗುಡಿ ಹೇಳಿದರು.
