ವಿಜಯನಗರ: ತುಂಗಭದ್ರ ಜಲಾಶಯದಲ್ಲಿ ತುಂಬಿರುವ ಭಾರಿ ಪ್ರಮಾಣದ ಹೂಳನ್ನು ವೈಜ್ಞಾನಿಕವಾಗಿ ತೆರವುಗೊಳಿಸಲು ಸಾಧ್ಯವಿದೆಯೇ ಎಂಬುದನ್ನು ಸರ್ಕಾರ ತಕ್ಷಣ ತಜ್ಞರಿಂದ ಪರಿಶೀಲಿಸಬೇಕು. ಹೂಳು ತೆರವು ಪ್ರಾಯೋಗಿಕವಾಗಿ ಸಾಧ್ಯವಿಲ್ಲ ಎಂದಾದರೆ, ಯಾವುದೇ ವಿಳಂಬ ಮಾಡದೆ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಸರ್ಕಾರ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟು ಯೋಜನೆಯನ್ನು ಕಾರ್ಯಗತಗೊಳಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಇಂದು ಪಾದಯಾತ್ರೆಯ ಸಂದರ್ಭದಲ್ಲಿ ನವುಲೆ ಸಮಾನಾಂತರ ಜಲಾಶಯ ಹೋರಾಟಗಾರರ ಜೊತೆ ನಡೆದ ಸಂವಾದದಲ್ಲಿ ಆಗ್ರಹಿಸಿದರು.
ತುಂಗಭದ್ರ ಜಲಾಶಯ ಅಚ್ಚುಕಟ್ಟು ಪ್ರದೇಶದ ಲಕ್ಷಾಂತರ ರೈತರ ಜೀವನಾಡಿಯಾಗಿದ್ದು, ಜಲಾಶಯದ ಸಂಗ್ರಹ ಸಾಮರ್ಥ್ಯ ಹೂಳಿನಿಂದ ಕುಸಿಯುತ್ತಿರುವ ಸಂದರ್ಭದಲ್ಲಿ ಸರ್ಕಾರ ಇನ್ನೂ ಸ್ಪಷ್ಟ ನಿರ್ಧಾರ ಕೈಗೊಳ್ಳದೆ ಕಾಲಹರಣ ಮಾಡುತ್ತಿರುವುದು ಸರಿಯಲ್ಲ ಎಂದು ಅವರು ಹೇಳಿದರು.
“ಹೂಳು ತೆಗೆಯಲು ಸಾಧ್ಯವಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಮತ್ತೊಂದೆಡೆ ಸಮಾನಾಂತರ ಜಲಾಶಯ ನಿರ್ಮಾಣವೇ ಶಾಶ್ವತ ಪರಿಹಾರ, ಹೂಳು ತೆಗೆಯುವುದು ಸಾಧ್ಯವಿಲ್ಲ ಎಂಬ ಅಭಿಪ್ರಾಯವೂ ಇದೆ. ಈ ಗೊಂದಲಕ್ಕೆ ಸರ್ಕಾರವೇ ತೆರೆ ಎಳೆಯಬೇಕು. ಹೂಳು ತೆರವು ಸಾಧ್ಯವೇ ಇಲ್ಲವೇ ಎಂಬುದನ್ನು ತಾಂತ್ರಿಕವಾಗಿ ಪರಿಶೀಲಿಸಿ ಸ್ಪಷ್ಟ ವರದಿ ಪಡೆಯಬೇಕು. ರೈತರನ್ನು ಇನ್ನೂ ನಾಲ್ಕೈದು ವರ್ಷ ಕಾಯಿಸುವಂತಾಗಬಾರದು” ಎಂದು ವಿಜಯೇಂದ್ರ ಹೇಳಿದರು.
ಬರ ಬಂದಾಗ ಮಾತ್ರ ಹೂಳು ತೆಗೆಯಲು ಸಾಧ್ಯ ಎಂದರೆ ಅದು ಪರಿಹಾರವಲ್ಲ
ಜಲಾಶಯದಲ್ಲಿ ನೀರು ಇಲ್ಲದ ಸಂದರ್ಭದಲ್ಲಿ ಮಾತ್ರ ದೊಡ್ಡ ಪ್ರಮಾಣದಲ್ಲಿ ಹೂಳು ತೆರವು ಕಾರ್ಯ ಕೈಗೊಳ್ಳಲು ಸಾಧ್ಯವಾಗುವುದಾದರೆ, ಮುಂದಿನ ಬರಗಾಲದವರೆಗೆ ಕಾಯುವುದು ರೈತರ ಹಿತಕ್ಕೆ ವಿರುದ್ಧವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
“34 ಟಿಎಂಸಿ ಹೂಳು ಇದೆ ಎಂದು ಹೇಳಲಾಗುತ್ತಿದೆ. ಇಷ್ಟು ದೊಡ್ಡ ಪ್ರಮಾಣದ ಹೂಳನ್ನು ಯಾವ ತಂತ್ರಜ್ಞಾನದಿಂದ, ಎಷ್ಟು ಅವಧಿಯಲ್ಲಿ ಮತ್ತು ಎಷ್ಟು ವೆಚ್ಚದಲ್ಲಿ ತೆಗೆಯಬಹುದು ಎಂಬುದಕ್ಕೆ ಸರ್ಕಾರ ಸ್ಪಷ್ಟ ಉತ್ತರ ನೀಡಬೇಕು. ಹಿಂದೆ ಹೂಳು ತೆರವು ಪ್ರಯತ್ನ ನಡೆದಿದ್ದರೆ ಅದರ ಫಲಿತಾಂಶ ಮತ್ತು ತಾಂತ್ರಿಕ ವರದಿಯನ್ನೂ ಬಹಿರಂಗಪಡಿಸಬೇಕು” ಎಂದು ಆಗ್ರಹಿಸಿದರು.
ಹೂಳು ತೆರವು ಸಾಧ್ಯವಿಲ್ಲ ಅಥವಾ ಆರ್ಥಿಕವಾಗಿ ಕಾರ್ಯಸಾಧ್ಯವಲ್ಲ ಎಂಬುದು ತಜ್ಞರ ಅಭಿಪ್ರಾಯವಾದರೆ, ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಸರ್ಕಾರ ತಕ್ಷಣ ಮುಂದಾಗಬೇಕು. ಈಗಾಗಲೇ ಹಲವು ವರ್ಷಗಳಿಂದ ಈ ವಿಚಾರ ಚರ್ಚೆಯಲ್ಲಿದ್ದು, ಹಿಂದಿನ ಸರ್ಕಾರದ ಅವಧಿಯಲ್ಲಿ ಡಿಪಿಆರ್ ಸಿದ್ಧಪಡಿಸಲು ₹14 ಕೋಟಿ ಮೀಸಲಿಟ್ಟಿದ್ದರೂ ಯೋಜನೆ ಮುಂದುವರಿಯಲಿಲ್ಲ ಎಂದು ವಿಜಯೇಂದ್ರ ತಿಳಿಸಿದರು.
₹22 ಸಾವಿರ ಕೋಟಿ ಯೋಜನೆ: ವಾಸ್ತವಿಕ ವೆಚ್ಚದ ಬಗ್ಗೆ ಸದನದಲ್ಲಿ ಚರ್ಚೆಯಾಗಲಿ
ಸಮಾನಾಂತರ ಜಲಾಶಯಕ್ಕೆ ಸುಮಾರು ₹22 ಸಾವಿರ ಕೋಟಿ ವೆಚ್ಚವಾಗಲಿದೆ ಎಂಬ ಅಂದಾಜು ಇದೆ. ಇಷ್ಟು ದೊಡ್ಡ ಮೊತ್ತದ ಯೋಜನೆಯಲ್ಲಿ ಆರಂಭಿಕ ಅಂದಾಜು, ಅಂತಿಮ ವೆಚ್ಚ, ಯೋಜನೆ ಪೂರ್ಣಗೊಳ್ಳುವ ಅವಧಿ ಹಾಗೂ ರಾಜ್ಯದ ಮೇಲಿನ ಹಣಕಾಸಿನ ಹೊರೆ ಕುರಿತು ಸದನದಲ್ಲಿ ಸಮಗ್ರ ಚರ್ಚೆ ನಡೆಯಬೇಕು ಎಂದು ಅವರು ಹೇಳಿದರು.
“ಇಂದು ₹15 ಸಾವಿರ ಅಥವಾ ₹22 ಸಾವಿರ ಕೋಟಿ ಎಂದು ಹೇಳಿ ಯೋಜನೆ ಆರಂಭಿಸಿ, ಪೂರ್ಣಗೊಳ್ಳುವ ವೇಳೆಗೆ ವೆಚ್ಚ ₹35 ಸಾವಿರ ಕೋಟಿಗೆ ಏರುವ ಪರಿಸ್ಥಿತಿ ಬರಬಾರದು. ಇದು ತೆರಿಗೆದಾರರ ಹಣ. ಆದ್ದರಿಂದ ನಾವು ವಿರೋಧ ಪಕ್ಷದಲ್ಲಿದ್ದರೂ ಜವಾಬ್ದಾರಿಯಿಂದ ಮಾತನಾಡಬೇಕು” ಎಂದರು.
