ಬೆಂಗಳೂರು: ನಾಟ್ಯಮಯೂರಿ ಕುಮಾರಿ ನಿತ್ಯಾಪ್ರೇಮ್ ಅವರ ‘ನಿತ್ಯಾರ್ಪಣ ಪ್ರದರ್ಶನ ಕಲೆ’ ಸಂಸ್ಥೆಯ ಉದ್ಘಾಟನಾ ಸಮಾರಂಭವು ಎಚ್ಎಸ್ಆರ್ ಬಡಾವಣೆಯಲ್ಲಿ ವಿಜೃಂಭಣೆಯಿಂದ ನಡೆಯಿತು. ನಿತ್ಯಾಪ್ರೇಮ್ ಅವರ ನಾಟ್ಯಗುರು ಡಾ. ಸಂಜಯ್ ಶಾಂತಾರಾಮ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಂಸ್ಥೆಯನ್ನು ಉದ್ಘಾಟಿಸಿದರು.
ಸಮಾರಂಭದ ಅಂಗವಾಗಿ ನಿತ್ಯಾಪ್ರೇಮ್ ಹಾಗೂ ಅವರ ತಂಡದಿಂದ ಮನಮೋಹಕ ಭರತನಾಟ್ಯ ಪ್ರದರ್ಶನ ನಡೆಯಿತು.
ಎರಡೂವರೆ ವರ್ಷದ ಬಾಲ್ಯದಲ್ಲಿಯೇ ಭರತನಾಟ್ಯದತ್ತ ಮೊದಲ ಹೆಜ್ಜೆಯಿಟ್ಟ ನಿತ್ಯಾಪ್ರೇಮ್ ಅವರು ಇಂದು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರತಿಭಾವಂತ ಕಲಾವಿದೆಯಾಗಿದ್ದಾರೆ. ಪೋಷಕರಾದ ಶ್ರೀಮತಿ ಉಷಾ ಹಾಗೂ ಶ್ರೀ ಪ್ರೇಮ್ ಬಲೀಂದ್ರ ಅವರ ಪ್ರೋತ್ಸಾಹದೊಂದಿಗೆ ಆರಂಭವಾದ ಅವರ ಕಲಾಯಾನ, ಗುರು ಪ್ರಕಾಶ್ ಅಯ್ಯರ್, ದಿವಂಗತ ಗುರು ಪದ್ಮಿನಿ ರಾಮಚಂದ್ರನ್ ಹಾಗೂ ಡಾ. ಸಂಜಯ್ ಶಾಂತಾರಾಮ್ ಅವರ ಮಾರ್ಗದರ್ಶನದಲ್ಲಿ ಬೆಳೆದು ಬಂದಿದೆ.
ನಾಟ್ಯಮಯೂರಿ, ನವಪರ್ವ ನಾಟ್ಯರತ್ನ, ಕರ್ನಾಟಕ ಯುವ ಶಾಂತಳೆ, ಯುವರತ್ನ, ಪ್ರತಿಭಾ ಪುರಸ್ಕಾರ, ವಿಶ್ವ ಸಾಧಕ ಹಾಗೂ ಆರ್ಯಭಟ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಅವರು ಭಾಜನರಾಗಿದ್ದಾರೆ. ದೂರದರ್ಶನ ಚಂದನದ ಬಿ-ಗ್ರೇಡ್ ಕಲಾವಿದೆಯಾಗಿರುವ ನಿತ್ಯಾಪ್ರೇಮ್ ಅವರು ಕಂಬೋಡಿಯಾದ ಅಂಗ್ಕೋರ್ ವಾಟ್, ಕತಾರ್, ಮಲೇಷ್ಯಾ, ಮಸ್ಕಟ್ ಹಾಗೂ ಬಾಲಿ ಸೇರಿದಂತೆ ಹಲವು ದೇಶಗಳಲ್ಲಿ ಭರತನಾಟ್ಯ ಪ್ರದರ್ಶನ ನೀಡಿ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸಿದ್ದಾರೆ.
ಮೈಸೂರು ದಸರಾ, ಹಂಪಿ ಉತ್ಸವ, ನಾಡಪ್ರಭು ಕೆಂಪೇಗೌಡ ರಾಷ್ಟ್ರೀಯ ಉತ್ಸವ ಸೇರಿದಂತೆ ಅನೇಕ ಪ್ರತಿಷ್ಠಿತ ವೇದಿಕೆಗಳಲ್ಲಿ ನೃತ್ಯ ಪ್ರದರ್ಶಿಸಿರುವ ಅವರು ವೀಣೆ ವಾದನ, ಮಾಡೆಲಿಂಗ್ ಹಾಗೂ ಚಿತ್ರರಂಗದಲ್ಲಿಯೂ ತಮ್ಮ ಪ್ರತಿಭೆ ಮೆರೆದಿದ್ದಾರೆ. ಕನ್ನಡದ ‘ಮಗ್ಗಿ ಪುಸ್ತಕ’ಹಾಗೂ ಬಿಡುಗಡೆಯಾಗಲಿರುವ ತಮಿಳಿನ ‘ಮಾತ್ರಂ’ ಚಿತ್ರಗಳಲ್ಲಿ ಅಭಿನಯಿಸಿರುವ ನಿತ್ಯಾಪ್ರೇಮ್ ಅವರು ತಮ್ಮ ನೂತನ ‘ನಿತ್ಯಾರ್ಪಣ ಪ್ರದರ್ಶನ ಕಲೆ’ ಸಂಸ್ಥೆಯ ಮೂಲಕ ಹೊಸ ಪ್ರತಿಭೆಗಳನ್ನು ರೂಪಿಸುವ ಸಂಕಲ್ಪ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪ್ರೊ. ಸದಾಶಿವ ರೆಡ್ಡಿ, ವಿಜಯಲಕ್ಷ್ಮಿ ಆನಂದ್, ಬಿಜೆಪಿ ಕರ್ನಾಟಕ ರಾಜ್ಯ ಮಹಿಳಾ ಕಾರ್ಯದರ್ಶಿ, ಪೊಲೀಸ್ ಇಲಾಖೆಯ ನಾರಾಯಸ್ವಾಮಿ, ನೌಲಿ ಪ್ರವೀಣ ಶ್ರೀ ಚಂದ್ರಾಚಾರ್, ಯೋಗಗುರುಗಳಾದ ನ. ಕೃಷ್ಣಮೂರ್ತಿ ಹಾಗೂ ಕರಣಂ ಕೃಷ್ಣಮೂರ್ತಿ, ಲಹರಿ ಸ್ಕೂಲ್ ಆಫ್ ಮ್ಯೂಸಿಕ್ನ ಸಾವಿತ್ರಮ್ಮ, ರಾಜ್ ಯೋಗ ಸ್ಟುಡಿಯೋದ ರಾಜೇಂದ್ರ ಕೆ. ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
