ದಾವಣಗೆರೆ: ಸಿದ್ದರಾಮಯ್ಯ ಅವರು ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಸಂಪುಟದಲ್ಲಿದ್ದ ಹಲವು ಸಚಿವರು ಸಿದ್ದರಾಮಯ್ಯ ಅವರ ರಾಜೀನಾಮೆಯನ್ನು ನೆನೆದು ಕಣ್ಣೀರು ಹಾಕಿದ್ದಾರೆ.
ಹೌದು, ಸಿದ್ದರಾಮಯ್ಯ ಅವರು ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಸಿದ್ದರಾಮಯ್ಯ ಅವರ ಸಂಪುಟದಲ್ಲಿದ್ದ ಕೆಲ ಸಚಿವರು ಕಣ್ಣೀರ ಧಾರೆ ಹರಿಸಿದ್ದಾರೆ. ಇನ್ನು ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಉನ್ನತ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಎಂ ಸಿ ಸುಧಾಕರ್ ಅವರು ಸಿದ್ದರಾಮಯ್ಯ ಅವರ ರಾಜೀನಾಮೆಯನ್ನು ನೆನೆದು ಭಾವುಕರಾಗಿದ್ದಾರೆ.
ನಗರದಲ್ಲಿ ಇಂದು (ಶುಕ್ರವಾರ ಮೇ 29) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರನ್ನು ಕಳೆದ ಎರಡು, ಮೂರು ದಿನಗಳಿಂದ ನೋಡಲಾಗುತ್ತಿಲ್ಲ. ಎಲ್ಲಾ ವರ್ಗಗಳನ್ನು ಸಮಾನವಾಗಿ ತೆಗೆದುಕೊಂಡು ಹೋಗಿ, ಒಂದು ಜಾತಿಗೆ ಸೀಮಿತವಾಗದೇ ಎಲ್ಲಾ ಸಮುದಾಯಕ್ಕೆ ಸಮಾನತೆ ನೀಡಿದ ವ್ಯಕ್ತಿ ಎಂದರೆ ಅದು ಸಿದ್ದರಾಮಯ್ಯನವರು. ಆದರೆ ಅಂತಹ ವ್ಯಕ್ತಿಯನ್ನು ನೋಡಲಾಗಲಿಲ್ಲ ಎಂದು ಕಣ್ತುಂಬಿಕೊಂಡರು.
ಒಬ್ಬ ರಾಜಕಾರಣಿಯ ವ್ಯಕ್ತಿತ್ವ ಹೇಗೆ ಇರುತ್ತೆ ಎನ್ನುವುದನ್ನು ತಿಳಿಸಿಕೊಟ್ಟಿದ್ದರು. ಅಲ್ಲದೇ ಇದರಿಂದ ಕಾಂಗ್ರೆಸ್ ಪಕ್ಷದ ವರ್ಚಸ್ಸು ಕೂಡ ಸಾಕಷ್ಟು ವೃದ್ಧಿಯಾಗಿದೆ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ ಎಂದು ಅವರ ಅನುಭವ ನಮಗೆಲ್ಲ ಪಾಠ ಹೇಳಿದೆ. ನಾಳೆ ಸಭೆ ನಡೆಯಲಿದೆ, ಸಮಯ ಹಾಗೂ ಸ್ಥಳ ನಿಗದಿಯಾಗಿಲ್ಲ. ಶಾಸಕಾಂಗದ ಸಭೆಯಾದ ಬಳಿಕ ಅಧಿಕೃತವಾಗಿ ಡಿಕೆಶಿಯವರನ್ನು ಸಿಎಂ ಆಗುತ್ತಾರೆ. ಡಿಕೆಶಿಯವರು ಸಿಎಂ ಆಗುವುದಕ್ಕೆ ಯಾವುದೇ ಅಡ್ಡಿ ಅತಂಕವಿಲ್ಲ ಎಂದರು.
ಡಿಕೆಶಿಯವರು ಪಕ್ಷಕ್ಕಾಗಿ ಸಾಕಷ್ಟು ದುಡಿದಿದ್ದಾರೆ. ಆದ್ದರಿಂದ ಹೈಕಮಾಂಡ್ ಈ ಬಾರಿ ಅವರಿಗೆ ಸಿಎಂ ಆಗಲು ಅವಕಾಶ ನೀಡಿದೆ. ಮುಂದೆ ಎಲ್ಲರಿಗೂ ಅವಕಾಶ ಸಿಗಲಿದೆ. ಡಿಕೆಶಿಯವರು ಸಿಎಂ ಆಗಲು ಯಾರ ವಿರೋಧ ಇಲ್ಲ. ಸ್ವತಃ ಸಿದ್ದರಾಮಯ್ಯನವರೇ ಬೆಂಬಲವನ್ನು ಸೂಚಿಸಿದ್ದಾರೆ. 2028ಕ್ಕೆ ಒಟ್ಟಾಗಿ ಶ್ರಮಿಸಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರಲು ಮುಂದಾಗುತ್ತೇವೆ ಎಂದು ಹೇಳಿದರು.
