ಸಚಿವ ದರ್ಶನಾಪುರ ಖಾತೆ ಬದಲಾವಣೆ ಚರ್ಚೆ..!?/ ಡಿಸಿಎಂ ಸ್ಥಾನಕ್ಕೆ ಹೆಚ್ಚಿದ ಒತ್ತಡ
ಶಹಾಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆ ಸಚಿವರ ಬದಲಾವಣೆ ಚರ್ಚೆ ಕೂಡ ಮುನ್ನಲೆಗೆ ಬಂದಿದ್ದು, ಸಚಿವ ಸ್ಥಾನಕ್ಕಾಗಿ ಕೇಲ ಶಾಸಕರು, ಸಚಿವರುಗಳು ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ. ಅದೇ ರೀತಿ ಹೊಸ ಸಂಪುಟಕ್ಕೆ ಹೊಸ ಸಚಿವರ ನೇಮಕ ನಡೆದಾಗ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರಿಗೆ ಈ ಬಾರಿಯೂ ಅದೃಷ್ಠ ಒಲಿಯುವುದೇ ಎನ್ನುವ ಚರ್ಚೆ ಜೋರಾಗಿ ನಡೆಯುತ್ತಿದೆ.
ಆಡಳಿತಾತ್ಮಕ ದೃಷ್ಠಿಯಿಂದ ಹೊಸ ಸಿಎಂ ಸಾಕಷ್ಟು ಬದಲಾವಣೆ ಮಾಡುವುದು ನಿಶ್ಚಿತವಾಗಿದ್ದು, ಕೇಲ ಸಚಿವರನ್ನು ಕೈಬಿಡುವ ಸಾಧ್ಯತೆ ಇದ್ದು, ಬದಲಾವಣೆ ಹಂತ ಹಂತವಾಗಿ ನಡೆಯುತ್ತದೆ. ಆದ್ದರಿಂದ ಯಾದಗಿರಿ ಉಸ್ತುವಾರಿ ಸಚಿವರಾಗಿರುವ ಸಚಿವ ದರ್ಶನಾಪುರ ಅವರಿಗೆ ಮತ್ತೊಮ್ಮೆ ಅವಕಾಶ ಸಿಗಬೇಕು ಎಂದು ಅವರ ಅಭಿಮಾನಿಗಳು ಬಯಸುತ್ತಿದ್ದಾರೆ.
ಅಧಿಕಾರಿಗಳ ಸ್ಥಾನ ಪಲ್ಲಟ
ಸಚಿವರ ಬದಲಾವಣೆ ಹೊಸ ನೇಮಕ ಆದ ಬೆನ್ನಲ್ಲೇ ಜಿಲ್ಲೆಯ ಪ್ರಮುಖ ಇಲಾಖೆಯ ಅಧಿಕಾರಿಗಳ ಸ್ಥಾನಪಲ್ಲಟವೂ ನಿಶ್ವಿತ ಎಂದು ಹೇಳಲಾಗುತ್ತಿದೆ.ತಮ್ಮ ಆಯಕಟ್ಟಿನ ಸ್ಥಳಕ್ಕೆ ತಮ್ಮ ಆಪ್ತರು ನಂಬಿಕಸ್ಥರು, ಉತ್ತಮ ಆಡಳಿತಗಾರರು ಹಾಗೂ ಕೇಲ ಮಾನದಂಡದ ಆಧಾರದಲ್ಲಿ ಪ್ರಮುಖ ಹುದ್ದೆ ನೀಡಲಾಗುತ್ತದೆ. ಒಂದು ವೇಳೆ ಸಚಿವರು ಬದಲಾವಣೆ ಆದರೆ ಅಧಿಕಾರಿಗಳ ವರ್ಗಾವಣೆ ಸಹಜವಾಗಿ ಆಗಲಿದೆ. ಇದು ಹೊಸ ಸಿಎಂ ನಿರ್ಧಾರದ ಮೇಲೆ ಎಲ್ಲವೂ ಅವಲಂಬಿತವಾಗಿದೆ ಎನ್ನುವುದು ಪ್ರಜ್ಞಾವಂತರ ಅಭಿಪ್ರಾಯ.
ಡಿಸಿಎಂ ಸ್ಥಾನದ ರೇಸ್ನಲ್ಲಿರುವ ಸಚಿವ ಶರಣಬಸಪ್ಪಗೌಡ ದರ್ಶನಪುರ
ಹಿರಿತನ ಮತ್ತು ಡಿಸಿಎಂ ಸ್ಥಾನದ ರೇಸ್ನಲ್ಲಿರುವ ಸಚಿವ ಶರಣಬಸಪ್ಪಗೌಡ ದರ್ಶನಪುರ ಅವರು ಡಿಕೆಶಿ ಸಂಪುಟದಲ್ಲೂ ಮುಂದುವರಿಯುವ ಸಾಧ್ಯತೆ ಹೆಚ್ಚಿದ್ದು, ಆದರೆ ಸಣ್ಣ ಕೈಗಾರಿಕೆ ಖಾತೆ ಬದಲು ಬೇರೆ ಇಲಾಖೆ ಹೊಣೆ ಹೊರುವ ಚರ್ಚೆ ಕ್ಷೇತ್ರದಲ್ಲಿ ಶುರುವಾಗಿದೆ.
ಸಚಿವ ದರ್ಶನಾಪುರ ಅವರಿಗೆ ‘ಡಿಸಿಎಂ’ ಸ್ಥಾನ ಕೊಡ
ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ಧರಾಮಯ್ಯ ರಾಜೀನಾಮೆ ನೀಡಿದ ಬೆನ್ನಲ್ಲೇ ಸಚಿವ ಸಂಪುಟ ವಿಸ್ತರಣೆ ಚರ್ಚೆ ಜೋರಾಗಿದ್ದು, ಕಾಂಗ್ರೆಸ್ ಸರಕಾರದಲ್ಲಿ ಒಂದಷ್ಟು ಖಾತೆಗಳು ಬದಲಾವಣೆಗೊಳ್ಳಲಿವೆ ಎನ್ನುವ ಸುದ್ದಿ ರಾಜಕೀಯ ರಂಗದಲ್ಲಿ ಹರಿದಾಡುತ್ತಿದೆ. ಸದ್ಯ ರಾಜ್ಯ ರಾಜಕಾರಣದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದ್ದು, ಸದಾ ಜನಪರ ಕೆಲಸದಲ್ಲಿ ತೊಡಗಿರುವ ಹಿರಿಯ ರಾಜಕಾರಣಿಗಳಾದ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರಿಗೆ ಡಿಸಿಎಂ ಖಾತೆ ನೀಡಬೇಕು ಎಂದು ಗ್ಯಾರಂಟಿ ಯೋಜನೆ ಅನುಷ್ಠಾನದ ತಾಲೂಕ ಸಮಿತಿ ಸದಸ್ಯ ಮಲ್ಲಣಗೌಡ ತಿಪ್ಪನಹಳ್ಳಿ ಮನವಿ ಮಾಡಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧೀ ಅವರಿಗೆ ಮನವಿ ಮಾಡಿರುವ ಅವರು ಸಣ್ಣ ಕೈಗಾರಿಕೆ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರು ಪ್ರತಿ ಬಾರಿಯ ಚುನಾವಣೆಯಲ್ಲಿಯೂ ಹೆಚ್ಚು ಶ್ರಮ ವಹಿಸಿ ಕಾಂಗ್ರೆಸ್ ಗೆಲುವಿನಲ್ಲಿ ದರ್ಶನಾಪುರ ಅವರ ಪ್ರಭಾವ ಸಾಕಷ್ಟಿದೆ. ಹಿರಿಯ ಅನುಭವಿ ರಾಜಕಾರಣಿ ದರ್ಶನಾಪುರ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿದರೆ ಈ ಭಾಗದ ಅಭಿವೃದ್ದಿಗೆ ಸಹಕಾರಿಯಾಗುತ್ತದೆ.
ಸಿದ್ದರಾಮಯ್ಯ ಅವರು ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ತಮ್ಮದೇ ಆದ ವಿಶಿಷ್ಟ ಚಾಪು ಮೂಡಿಸಿದ್ದು, ಅವರ ರಾಜೀನಾಮೆ ಅವರ ಅಭಿಮಾನಿಗಳಿಗೆ ಸಾಕಷ್ಟು ಬೇಸರ ತಂದಿದೆ. ಅಂತಹ ನಾಯಕನನ್ನು ಪಡೆದ ನಮ್ಮ ಕರುನಾಡಿನ ಜನರೇ ಧನ್ಯ, ಅದೆ ರೀತಿ ಸದಾ ಜನರೊಡನೆ ಜನರಿಗಾಗಿ ನಿತ್ಯ ಶ್ರಮಿಸುವ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರಿಗೆ ಡಿಸಿಎಂ ಪಟ್ಟ ನೀಡಿದರೆ ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಜಿಲ್ಲೆಗಳಿಗೆ ಅಭಿವೃದ್ದಿ ಕಾರ್ಯಗಳಿಗೆ ಪೂರಕವಾಗಲಿದೆ. ಜಿಲ್ಲೆಯು ಹಿಂದುಳಿದ ಹಣೆಪಟ್ಟಿ ಹೊತ್ತಿದ್ದು ಅದನ್ನು ಅಳಿಸಲು ಸಾಕಷ್ಟು ಪ್ರಯತ್ನದಲ್ಲಿರುವ ಅವರಿಗೆ ಡಿಸಿಎಂ ಸ್ಥಾನ ನೀಡಿದರೆ ಮತ್ತಷ್ಟು ಬಲ ಬಂದಂತೆ ಆಗಲಿದೆ, ಹೊಸ ಸಂಪುಟದಲ್ಲಿ ಡಿಸಿಎಂ ಹುದ್ದೆ ನೀಡಿದರೆ ಪಕ್ಷಕ್ಕೆ, ಸರಕಾರಕ್ಕೂ ಒಳ್ಳೆ ಹೆಸರು ತಂದು ದಕ್ಷ ಮತ್ತು ಪ್ರಮಾಣಿಕ ಕೆಲಸ ಮಾಡುತ್ತಾರೆ ಎನ್ನುವುದು ಬೆಂಬಲಿಗರ ವಿಶ್ವಾಸ ಎಂದು ಕುರಿ ಮತ್ತು ಮೇಕೆ ಸಾಕಾಣಿಕೆದಾರ ಮಹಾಮಂಡಳಿ ನಿರ್ದೇಶಕರಾದ ಶಾಂತಗೌಡ ನಾಗನಟಿಗಿ ಹೇಳಿದರು.
