ಗದಗ: ಇತ್ತೀಚಿನ ದಿನಗಳಲ್ಲಿ ದಿನ ಬಳಕೆಯ ಪ್ರತಿಯೊಂದು ವಸ್ತುಗಳ ಬೆಲೆ ಏರಿಕೆ ಜೊತೆ ಡೀಸೆಲ್, ಪೆಟ್ರೋಲ್, ಗ್ಯಾಸ್ ಸೇರಿದಂತೆ ಪ್ರತಿ ವಸ್ತುವಿನ ಬೆಲೆ ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರು ದಿನನಿತ್ಯದ ಬದುಕು ಸಾಗಿಸಲು ಕಷ್ಟಪಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಚಿವ ಹೆಚ್ ಕೆ ಪಾಟೀಲ್ ಆಕ್ರೋಶಹೊರಹಾಕಿದ್ದಾರೆ.
ಈ ಕುರಿತು ಇಂದು (ಸೋಮವಾರ ಮೇ 25) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದೇಶದ ಆರ್ಥಿಕ ಸ್ಥಿತಿ ಸರಿಯಾದ ಮಾರ್ಗದಲ್ಲಿ ಇಲ್ಲವೇನೋ ಅನಿಸುತ್ತಿದೆ. ಆ ಕಾರಣಕ್ಕಾಗಿಯೇ ಕೇಂದ್ರ ಸರ್ಕಾರ ಜನರ ಬದುಕನ್ನು ಘಾಸಿಗೊಳಿಸುತ್ತಿದೆ. ಎರಡು ದಿನಕ್ಕೊಮ್ಮೆ, ಮೂರು ದಿನಕ್ಕೊಮ್ಮೆ ಪೆಟ್ರೋಲ್ ಬೆಲೆ ಏರಿಸುತ್ತಿರುವುದು ಯಾಕೆ? ಚುನಾವಣೆ ನಡೆದ ಮೂರು ತಿಂಗಳು ಒಂದು ರೂಪಾಯಿಯೂ ಹೆಚ್ಚಾಗಲಿಲ್ಲ.
ಆವಾಗ ದೇಶದ ಆರ್ಥಿಕತೆಯ ಬಗ್ಗೆ ಕಲ್ಪನೆ ಇರಲಿಲ್ಲವೇ? ಈಗ ಒಮ್ಮಿಂದೊಮ್ಮೆಗೆ ಶನಿವಾರಕ್ಕೊಮ್ಮೆ, ಸೋಮವಾರಕ್ಕೊಮ್ಮೆ ಬೆಲೆ ಏರಿಕೆ ಮಾಡುತ್ತಿರುವುದು ಅತ್ಯಂತ ದುರ್ದೈವದ ಸಂಗತಿ. ಕೇಂದ್ರ ಸರ್ಕಾರ ಇನ್ನುಮುಂದಾದರೂ ಎಚ್ಚೆತ್ತುಕೊಳ್ಳಬೇಕು, ಜನರ ಬದುಕಿನೊಂದಿಗೆ ಚಲ್ಲಾಟ ಆಡಬಾರದು ಎಂದು ಕಿಡಿಕಾರಿದರು. ಇದನ್ನೂ ಓದಿ: ದುಬಾರಿ ಮನುಷ್ಯ ಮೋದಿಯಿಂದ ₹57 ಲಕ್ಷ ಕೋಟಿ ಲೂಟಿ: ಕಾಂಗ್ರೆಸ್
