ಬೆಂಗಳೂರು: ಬಿಜೆಪಿ ಮತ್ತು ಮೋದಿ ಸರ್ಕಾರದ ಈ ಹಗಲು ದರೋಡೆಯು ಕೇವಲ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಅಬಕಾರಿ ಮತ್ತು ಕಸ್ಟಮ್ಸ್ ಸುಂಕವನ್ನು ವಿಧಿಸುವ ಮೂಲಕ ₹43 ಲಕ್ಷ ಕೋಟಿ ಸಂಗ್ರಹಿಸಿ ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕುವುದಕ್ಕೆ ಮಾತ್ರ ಸೀಮಿತವಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರೋಪಿಸಿದ್ದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಈ “ಜನರ ಲೂಟಿ” ಕೇವಲ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಿಗೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ಗೃಹಬಳಕೆಯ ಗ್ಯಾಸ್, ವಾಣಿಜ್ಯ ಗ್ಯಾಸ್, ಸಣ್ಣ ಎಫ್ಟಿಎಲ್ ಸಿಲಿಂಡರ್ ಹಾಗೂ ಸಿಎನ್ಜಿ ಬೆಲೆಗಳ ಬಾರಿ ಏರಿಕೆ ಕಂಡಿದೆ. ಇದು ದೈನಂದಿನ ಬಳಕೆಯ ಎಲ್ಲಾ ಅಗತ್ಯ ವಸ್ತುಗಳ ಬೆಲೆಗಳ ಮೇಲೂ ತೀವ್ರ ಪರಿಣಾಮ ಬೀರಿದೆ.
ಕೇಂದ್ರದ ಬಿಜೆಪಿ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್ಗೆ ₹7.52 ಹೆಚ್ಚಿಸುವ ಮೂಲಕ “ಇಂಧನ ಲೂಟಿ”ಯನ್ನು ಆರಂಭಿಸಿದೆ. ಕಳೆದ 11 ದಿನಗಳು ವೇತನ ವರ್ಗ, ರೈತರು, ಬಡವರು, ಗೃಹಿಣಿಯರು, ಸಣ್ಣ ಉದ್ಯಮಿಗಳು ಮತ್ತು ಜನಸಾಮಾನ್ಯರ ಜೇಬು ಹಾಗೂ ಬಜೆಟ್ ಪಾಲಿಗೆ ಅತ್ಯಂತ ವಿನಾಶಕಾರಿಯಾಗಿವೆ. ಬಿಜೆಪಿ ಸರ್ಕಾರ ಕನ್ನಡಿಗರಿಗೆ ಮಾಡುತ್ತಿರುವ ವಂಚನೆ ಮತ್ತು ಸುಲಿಗೆ ಅಕ್ಷಮ್ಯ.
ಈ ಅತಿರೇಕದ ಲೂಟಿ ಮತ್ತು ಪಿಕ್ಪಾಕೆಟ್ ವಿರುದ್ಧ ಸಾಮಾನ್ಯ ಜನರು ವಿವಿಧ ರೂಪದಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೂ, ಬಿಜೆಪಿ ನಾಯಕರು ಮತ್ತು ಮೋದಿ ಸರ್ಕಾರವು ಜನರ ಸಂಕಷ್ಟವನ್ನು ಹಾಸ್ಯ ಮಾಡುತ್ತಾ, ಕನ್ನಡಿಗರು ಮತ್ತು ದೇಶದ ಜನರು ಎದುರಿಸುತ್ತಿರುವ ಜೀವನೋಪಾಯದ ಬಿಕ್ಕಟ್ಟಿಗೆ ಯಾವುದೇ ಸ್ಪಂದನೆ ನೀಡದೆ ಮೌನವಾಗಿದೆ ಎಂದರು.
ತುರ್ತು ಸಂದರ್ಭಗಳಲ್ಲಿ ದೇಶಕ್ಕೆ ನೆರವಾಗಲು ಇರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ “ತುರ್ತು ಮೀಸಲು ನಿಧಿ”ಯನ್ನು ಲೂಟಿ ಮಾಡುವ ಹಂತಕ್ಕೂ ತಲುಪಿದೆ. ಮೇ 23 ರಂದು, ಅಂದರೆ 2 ದಿನಗಳ ಹಿಂದೆ, ಡಾಲರ್ ಎದುರು ಭಾರತೀಯ ರೂಪಾಯಿಯ ಮೌಲ್ಯವು ತೀವ್ರವಾಗಿ ಕುಸಿದಿರುವುದರ ಲಾಭವನ್ನು ಪಡೆದುಕೊಂಡು, ಆರ್ಬಿಐನ ಅಮೂಲ್ಯವಾದ “ವಿದೇಶಿ ವಿನಿಮಯ ಮೀಸಲು” ಅನ್ನು ಮಾರಾಟ ಮಾಡುವ ಮೂಲಕ ಮೋದಿ ಸರ್ಕಾರವು ಆರ್ಬಿಐನಿಂದ ₹2.87 ಲಕ್ಷ ಕೋಟಿಯನ್ನು ಪಡೆದುಕೊಂಡಿದೆ ಎಂದರು.
ಕಳೆದ 12 ವರ್ಷಗಳಲ್ಲಿ, ಮೋದಿ ಸರ್ಕಾರವು ಆರ್ಬಿಐನಿಂದಲೇ ₹14 ಲಕ್ಷ ಕೋಟಿಯನ್ನು ಸಂಗ್ರಹಿಸಿದೆ. ಇದು ಬಿಜೆಪಿ ಸರ್ಕಾರ ನಡೆಸಿರುವ ಒಟ್ಟು ₹57 ಲಕ್ಷ ಕೋಟಿ (43 ಲಕ್ಷ ಕೋಟಿ + 14 ಲಕ್ಷ ಕೋಟಿ) ಲೂಟಿಯನ್ನು ಬಹಿರಂಗಪಡಿಸುತ್ತದೆ. ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳ ಕುರಿತು ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ!
ಕಳೆದ 12 ವರ್ಷಗಳಲ್ಲಿ ಮೋದಿ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ತೆರಿಗೆ ವಿಧಿಸುವ ಮೂಲಕ 43 ಲಕ್ಷ ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ. ಇದು 2014 ರಿಂದ ಪ್ರತಿದಿನ 1,000 ಕೋಟಿ ರೂಪಾಯಿಗಳ ಸಂಗ್ರಹಕ್ಕೆ ಸಮನಾಗಿರುತ್ತದೆ.
ಮೇ 26, 2014 ರಂದು (ಕಾಂಗ್ರೆಸ್-ಯುಪಿಎ ಅವಧಿಯಲ್ಲಿ) ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ ₹71.41 ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್ಗೆ ₹56.71 ಆಗಿತ್ತು. ಆದರೆ ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ಪ್ರತಿ ಲೀಟರ್ಗೆ ₹110.93 ಹಾಗೂ ಡೀಸೆಲ್ ಪ್ರತಿ ಲೀಟರ್ಗೆ ₹98.89 ಕ್ಕೆ ಮಾರಾಟವಾಗುತ್ತಿದೆ. 2014 ರ ಕಚ್ಚಾ ತೈಲ ಬೆಲೆಗಳಿಗೆ (ಪ್ರತಿ ಬ್ಯಾರೆಲ್ಗೆ 108 ಯುಎಸ್ಡಿ) ಮತ್ತು ಪಶ್ಚಿಮ ಏಷ್ಯಾದಲ್ಲಿ ಯುದ್ಧ ಪ್ರಾರಂಭವಾಗುವ ಮುಂಚಿನ ಬೆಲೆಗೆ (ಪ್ರತಿ ಬ್ಯಾರೆಲ್ಗೆ 70 ಯುಎಸ್ಡಿ) ಹೋಲಿಸಿದರೆ, ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ ₹61.60 ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್ಗೆ ₹56.99 ಇರಬೇಕಾಗಿತ್ತು. ಉಳಿದ ಹೆಚ್ಚುವರಿ ಹಣವೆಲ್ಲವೂ ಬಿಜೆಪಿಯ ಸಂಪೂರ್ಣ ಲೂಟಿಯಾಗಿದೆ ಎಂದರು.
