ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದು ಈಗಾಗಲೇ ಮೂರು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ನಿನ್ನೆ (ಮಂಗಳವಾರ ಮೇ 19) ರಂದು ತುಮಕೂರಿನಲ್ಲಿ ಅದ್ದೂರಿಯಾಗಿ ಕಾಂಗ್ರೆಸ್ ಪಕ್ಷದ ಸಾಧನ ಸಮಾವೇಶವನ್ನ ಕೈಗೊಂಡಿದ್ದರು.
ಇನ್ನು ಈ ಸಾಧನ ಸಮಾವೇಶದಲ್ಲಿ ಗೃಹ ಸಚಿವ ಜಿ ಪರಮೇಶ್ವರ್ ಅವರು ತುಮಕೂರು ನಗರದ ಹೆಸರನ್ನ ಬದಲಾಯಿಸಬೇಕು ಎಂದು ಹೇಳಿದರು ಎಂಬ ಮಾತು ಈಗ ರಾಜ್ಯ ರಾಜಕೀಯದಲ್ಲಿ ಚರ್ಚೆ ಆಗುತ್ತಿದೆ.
ಇನ್ನು ಈ ಕುರಿತು ಇದೀಗ ಗೃಹ ಸಚಿವ ಜಿ ಪರಮೇಶ್ವರ್ ಅವರು ಪ್ರತಿಕ್ರಿಯಿಸಿದ್ದು, ಕಲ್ಪತರ ನಾಡು ತುಮಕೂರಿನ ಹೆಸರು ಬದಲಾವಣೆ ಆಗುವುದಿಲ್ಲ. ಹೆಸರು ಬದಲಾಯಿಸಬೇಕು ಎಂದು ನಾನು ಯಾವುದೇ ರೀತಿಯ ಹೇಳಿಕೆಯನ್ನು ನೀಡಿಲ್ಲ. ಜಿಲ್ಲೆಯ ವಿಸ್ತೀರ್ಣವೂ ಬದಲಾಗುವುದಿಲ್ಲ ಎಂದು ಹೇಳಿದ್ದಾರೆ.
ನಗರದಲ್ಲಿ ಇಂದು (ಬುಧವಾರ ಮೇ 20) ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು, ತುಮಕೂರನ್ನು ಬೆಂಗಳೂರು ಅಭಿವೃದ್ಧಿ ವಲಯದೊಂದಿಗಿನ ಸಂಪರ್ಕದ ಪರಿಕಲ್ಪನೆಯಡಿ ಪರಿಗಣಿಸುವ ಉದ್ದೇಶ, ಜಿಲ್ಲೆಯ ಸರ್ವಾಂಗೀಣ ಮತ್ತು ಸರ್ವತೋಮುಖ ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡುವುದಾಗಿದೆ. ಬೆಂಗಳೂರು ಮಾದರಿಯ ಮೂಲಸೌಕರ್ಯ, ಕೈಗಾರಿಕಾ ಮತ್ತು ಹೂಡಿಕೆ ಅವಕಾಶಗಳ ಸಂಪರ್ಕದಿಂದ ತುಮಕೂರಿಗೆ ಹೆಚ್ಚಿನ ಹೂಡಿಕೆಗಳು ಹರಿದುಬಂದು, ಉದ್ಯೋಗ ಹಾಗೂ ಆರ್ಥಿಕ ಚಟುವಟಿಕೆಗಳು ವೃದ್ಧಿಯಾಗಲಿವೆ ಎಂಬ ನಂಬಿಕೆ ಇದೆ. ಇದನ್ನೂ ಓದಿ: ನಕಲಿ ವೈದ್ಯರಿಂದ ಆಸ್ಪತ್ರೆ ತೆರೆಯಲು ಇಲಾಖೆ ಅಧಿಕಾರಿಗಳ ಕೃಪೆ..?
ಯಾವುದೇ ಕಾರಣಕ್ಕೂ ತುಮಕೂರಿನ ಹೆಸರು, ಗೌರವ ಮತ್ತು ಅಸ್ಮಿತೆಗೆ ಧಕ್ಕೆಯಾಗುವುದಿಲ್ಲ. “ಕಲ್ಪತರ ನಾಡು” ಎಂಬ ತನ್ನ ವೈಶಿಷ್ಟ್ಯ ಮತ್ತು ಗುರುತನ್ನು ತುಮಕೂರು ಸದಾ ಉಳಿಸಿಕೊಂಡೇ ಮುಂದುವರಿಯುತ್ತದೆ. ಆದ್ದರಿಂದ ಈ ವಿಚಾರದಲ್ಲಿ ಸಾರ್ವಜನಿಕರು ಯಾವುದೇ ತಪ್ಪು ಕಲ್ಪನೆಗೆ ಒಳಗಾಗುವ ಅಗತ್ಯವಿಲ್ಲಎಂದು ಸ್ಪಷ್ಟಪಡಿಸಿದ್ದಾರೆ.
