ತುಮಕೂರು: ತುಮಕೂರು ಜಿಲ್ಲೆಯ 1,52,492 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುತ್ತಿದ್ದೇವೆ. ಒಂದು ಜಿಲ್ಲೆಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಕ್ಕು ಪತ್ರ ನೀಡುತ್ತಿರುವುದು ದೇಶದ ಇತಿಹಾಸದಲ್ಲಿ ಇದೇ ಮೊದಲು ಎಂಬ ದಾಖಲೆಗೆ ಪಾತ್ರವಾಗಿರುವ ನಮ್ಮ ಸರ್ಕಾರ ದೇಶಕ್ಕೆ ಮಾದರಿಯಾಗಿದೆ. ಪರಿಶ್ರಮ ಇದ್ದ ಕಡೆಗೆ ಇತಿಹಾಸ ಸೃಷ್ಟಿಯಾಗುತ್ತದೆ, ನಂಬಿಕೆ ಇದ್ದ ಕಡೆಗೆ ಅದ್ಭುತಗಳು ನಡೆಯುತ್ತವೆ. ಸತ್ಯ ಇದ್ದ ಕಡೆ ಗೆಲುವು ಇದ್ದೇ ಇರುತ್ತದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೇಳಿದರು.
ಕಲ್ಪತರು ನಾಡು ತುಮಕೂರಿನಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಸರ್ಕಾರದ 3 ವರ್ಷಗಳ ಸಾರ್ಥಕ ಪಯಣ ಹಾಗೂ 3ನೇ ವರ್ಷದ ಸಾಧನೆಯ ಸೇವೆಯ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ತರಬೇಕು ನಮ್ಮ ಬದುಕಿನಲ್ಲಿ ಬದಲಾವಣೆ ತರಲಿದ್ದಾರೆ ಎಂಬ ನಂಬಿಕೆಯೊಂದಿಗೆ 136 ಸ್ಥಾನಗಳನ್ನು ಗೆಲ್ಲಿಸಿ, ತುಮಕೂರಿನಲ್ಲಿ 7 ಶಾಸಕರನ್ನು ಗೆಲ್ಲಿಸಿ ರಾಜ್ಯದಲ್ಲಿ ನಿಮ್ಮ ಸರ್ಕಾರವನ್ನು ಅಧಿಕಾರಕ್ಕೆ ತಂದು ನಿಮ್ಮ ಋಣವನ್ನು ತೀರಿಸಲು ಅವಕಾಶ ಮಾಡಿಕೊಟ್ಟಿದ್ದೀರಿ. ಕಲ್ಪತರು ನಾಡು ಎಂದೇ ಖ್ಯಾತಿಯಾಗಿರುವ ತುಮಕೂರು ಶಿಕ್ಷಣಕ್ಕೆ, ಧಾರ್ಮಿಕತೆಗೆ ಸಾಕ್ಷಿಯಾಗಿದ್ದು ದಕ್ಷಿಣದ ಕಾಶಿಯಂತೆ ಪ್ರಸಿದ್ಧಿ ಪಡೆದಿದೆ. ಅಷ್ಟೇ ಅಲ್ಲದೇ ಧಾರ್ಮಿಕ, ಆಧ್ಯಾತ್ಮಿಕ, ಅನ್ನ, ಅಕ್ಷರ, ಆಶ್ರಯ ನೀಡಿರುವ ಪವಿತ್ರ ಭೂಮಿ. ಇದನ್ನೂ ಓದಿ: ಟ್ರಂಪ್ ಬಾಲ ಹಿಡಿದು ಸುತ್ತುತ್ತಿದ್ದ ಮೋದಿಯವರೇ ಈ ಬೆಲೆ ಏರಿಕೆಗೆ ಕಾರಣ: ಸಿಎಂ
ಬಡವರ ಬದುಕಿನಲ್ಲಿ ಸಾಮಾಜಿಕವಾಗಿ ಬದಲಾವಣೆ ತಂದಿರುವ ನಮ್ಮ ಪಂಚ ಗ್ಯಾರಂಟಿ ಯೋಜನೆಗಳು ಇಡೀ ದೇಶಕ್ಕೆ ಮಾದರಿಯಾಗಿವೆ. ನಮ್ಮ ಗ್ಯಾರಂಟಿಗಳ ಬಗ್ಗೆ ಟೀಕಿಸುವವರು ಈ ಹಿಂದೆ ಅಧಿಕಾರದಲ್ಲಿದ್ದಾಗ ಜನಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲಿಲ್ಲ. ದಾನ ಧರ್ಮ ಮಾಡುವ ‘ಕೈ’ ರಾಜ್ಯದಲ್ಲಿ ಅಧಿಕಾರದಲ್ಲಿರುವುದರಿಂದ ನುಡಿದಂತೆ ಗ್ಯಾರಂಟಿಗಳನ್ನು ಜಾರಿಗೊಳಿಸಿ ಜನರ ಬದುಕಿನಲ್ಲಿ ಬದಲಾವಣೆ ತರುತ್ತಿದ್ದೇವೆ ಎಂದರು.
