ಬೆಂಗಳೂರು: ಬೆಂಗಳೂರಿನಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಬೆಂಬಲ ನೀಡುವುದು ಮತ್ತು ಸರ್ಕಾರಿ ಶಾಲೆಗಳನ್ನು ಬಲಪಡಿಸುವುದು ಯಾವಾಗಲೂ ನನ್ನ ಪ್ರಮುಖ ಆದ್ಯತೆಯಾಗಿದೆ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.
ಬೆಂಗಳೂರು ದಕ್ಷಿಣ ಸಂಸದರ ಕಚೇರಿಯ ಸತತ ಪ್ರಯತ್ನದ ಫಲವಾಗಿ, ಬಸವನಗುಡಿಯ ಕರ್ನಾಟಕ ಪಬ್ಲಿಕ್ ಶಾಲೆ (KPS) ಅಭಿವೃದ್ಧಿಗಾಗಿ ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ ನಿಂದ ಸಿಎಸ್ಆರ್ ಅನುದಾನವನ್ನು ಪಡೆಯಲಾಗುತ್ತಿದ್ದು, 1903 ರಲ್ಲಿ ಸ್ಥಾಪನೆಯಾದ ಬಸವನಗುಡಿಯ ಕೆಪಿಎಸ್ ಶಾಲೆಯು ಬೆಂಗಳೂರಿನ ಅತ್ಯಂತ ಹಳೆಯ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ. ಪ್ರಸ್ತುತ ಈ ಶಾಲೆಯಲ್ಲಿ 1,500 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದು, ಅವರಲ್ಲಿ ಹೆಚ್ಚಿನವರು ಆರ್ಥಿಕವಾಗಿ ಹಿಂದುಳಿದ ಕುಟುಂಬದವರಾಗಿದ್ದಾರೆ. ಅವರ ಕುಟುಂಬದಲ್ಲೇ ಮೊದಲ ತಲೆಮಾರಿನ ಕಲಿಯುವವರಾಗಿದ್ದಾರೆ.
ಈ ಹಿಂದೆ ಶಾಲೆಯಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಕಾಮಗಾರಿಗಳ ಮುಂದುವರಿದ ಭಾಗವಾಗಿ, ಸಿಎಸ್ಆರ್ ಬೆಂಬಲದ ಮೂಲಕ ಶಾಲೆಯ ಮೂಲಸೌಕರ್ಯ ಮತ್ತು ಕಲಿಕಾ ಪರಿಸರವನ್ನು ಮತ್ತಷ್ಟು ಬಲಪಡಿಸುವುದು ಈ ಉಪಕ್ರಮದ ಗುರಿಯಾಗಿದೆ.
“ಬೆಂಗಳೂರಿನಲ್ಲಿ ಹೆಣ್ಣು ಮಕ್ಕಳ ಶಿಕ್ಷಣವನ್ನು ಬೆಂಬಲಿಸುವುದು ಯಾವಾಗಲೂ ನನ್ನ ಆದ್ಯತೆಯಾಗಿದೆ. 1903 ರ ಸುದೀರ್ಘ ಇತಿಹಾಸವಿರುವ ಕೆಪಿಎಸ್ ಬಸವನಗುಡಿ ಶಾಲೆಯು, ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯ ಹೆಣ್ಣು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಪರಿವರ್ತಕ ಪಾತ್ರ ವಹಿಸಿದೆ.
ಐಒಸಿಎಲ್ನಿಂದ ಲಭ್ಯವಾದ ಬೆಂಬಲದೊಂದಿಗೆ, ನಾವು ಈ ಸಂಸ್ಥೆಯನ್ನು ಮತ್ತಷ್ಟು ಬಲಪಡಿಸಲಿದ್ದೇವೆ. ಇದರಿಂದ ಇಲ್ಲಿ ಕಲಿಯುವ ಯುವತಿಯರು ಆತ್ಮವಿಶ್ವಾಸ ಮತ್ತು ಸ್ವಾವಲಂಬನೆಯೊಂದಿಗೆ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಶಕ್ತರಾಗುತ್ತಾರೆ.
ಕಳೆದ ಕೆಲವು ವರ್ಷಗಳಿಂದ ಈ ಶಾಲೆಯು ಶೈಕ್ಷಣಿಕ ಸಾಧನೆ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆ ಹಾಗೂ ಒಟ್ಟಾರೆ ದಾಖಲಾತಿಯಲ್ಲಿ ಗಣನೀಯ ಸುಧಾರಣೆಯನ್ನು ಕಂಡಿದೆ. ಇಲ್ಲಿನ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಸಾಧನೆಗಾಗಿ ಈ ಸಂಸ್ಥೆಯು ವಿವಿಧ ಕ್ಷೇತ್ರಗಳಲ್ಲಿ ಮನ್ನಣೆಯನ್ನು ಪಡೆದಿದೆ.
ಇತ್ತೀಚೆಗೆ ಮುಕ್ತಾಯಗೊಂಡ ಸಾರ್ವಜನಿಕ ಪರೀಕ್ಷೆಗಳಲ್ಲಿ ಶಾಲೆಯು ಎಸ್ಎಸ್ಎಲ್ಸಿ ಮತ್ತು ಪಿಯುಸಿ ಫಲಿತಾಂಶಗಳಲ್ಲಿ ಸುಧಾರಣೆ ಕಂಡಿದೆ. ಅನೇಕ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಮತ್ತು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಪರೀಕ್ಷೆಯಲ್ಲಿ ಪಲ್ಲವಿ ಎಸ್ (EBACs) ಶೇ 98 ರಷ್ಟು ಅಂಕಗಳನ್ನು ಗಳಿಸಿದ್ದರೆ, ಪ್ರಿಯಾಂಕಾ (PCMB) ಮತ್ತು ವಸಂತ (HESP) ಕ್ರಮವಾಗಿ ಶೇ 96.3 ರಷ್ಟು ಅಂಕಗಳನ್ನು ಗಳಿಸಿ ಸಾಧನೆ ಮಾಡಿದ್ದಾರೆ ಎಂದರು.
