ಬೆಂಗಳೂರು: ಮಾಹಿತಿ ತಂತ್ರಜ್ಞಾನದಲ್ಲಿ ಬೆಂಗಳೂರು ರಾಜಧಾನಿಯಾದಂತೆ, ಕೃಷಿ ತಂತ್ರಜ್ಞಾನದಲ್ಲಿಯೂ ಬೆಂಗಳೂರು ರಾಜಧಾನಿಯಾಗಬೇಕು. ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಕೃತಕ ಬುದ್ದಿಮತ್ತೆ ಸೇರಿದಂತೆ ಎಲ್ಲ ಕ್ಷೇತ್ರಗಳ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಆಯೋಜಿಸಿದ್ದ “ಗ್ಲೋಬಲ್ ಅಗ್ರಿಟೆಕ್ ಸಮ್ಮಿಟ್-2026″ನ್ನು ಇಂದು (ಶುಕ್ರವಾರ ಏ. 24) ಉದ್ಘಾಟಿಸಿ ಮಾತನಾಡಿದ ಅವರು, ಕೃಷಿ ಕ್ಷೇತ್ರದಲ್ಲಿನ ಹೊಸ ಬದಲಾವಣೆಗಳು ಪ್ರತಿ ರೈತರನ್ನೂ ತಲುಪಬೇಕು. ಈ ದಿಸೆಯಲ್ಲಿ ಎಫ್ ಕೆ ಸಿಸಿಐ ನ ಪ್ರಯತ್ನ ಉತ್ತಮವಾಗಿದೆ ಎಂದು ತಿಳಿಸಿದರು.
ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು
ಎಫ್ ಕೆ ಸಿಸಿಐ ಅಧ್ಯಕ್ಷರಾದ ಶ್ರೀಮತಿ ಉಮಾರೆಡ್ಡಿ ಅವರು ಉತ್ತಮ ವಾಣಿಜ್ಯೋದ್ಯಮಿಯಾಗಿ ನನಗೆ ಚಿರಪರಿಚಿತರು. ಕೃಷಿ ವಿವಿ ಹಾಗೂ ಎಫ್ ಕೆ ಸಿಸಿಐ ಸಹಭಾಗಿತ್ವದಲ್ಲಿ ಏರ್ಪಡಿಸಲಾದ ಆಯೋಜಿಸಿದ್ದ “ಗ್ಲೋಬಲ್ ಅಗ್ರಿಟೆಕ್ ಸಮ್ಮಿಟ್-2026 ರೈತರಿಗೆ ಸಹಕಾರಿಯಾಗಿದೆ. ರೈತರಿಗೆ ಉಪಯುಕ್ತವಾದ ಈ ಕಾರ್ಯಕ್ರಮದಲ್ಲಿ ಸಾವಯವ ಕೃಷಿ ಹಾಗೂ ಯಂತ್ರೋಪಕರಣಗಳ ವಸ್ತುಪ್ರದರ್ಶನ ಏರ್ಪಡಿಸಿರುವುದು ಉತ್ತಮವಾಗಿದೆ. ಆದರೆ ವಸ್ತುಪ್ರದರ್ಶನವನ್ನು ಪ್ರತ್ಯೇಕವಾಗಿ ಆಯೋಜಿಸುವುದು ಉತ್ತಮವಾಗಿದೆ. ಇಂತಹ ಕಾರ್ಯಕ್ರಮಗಳಲ್ಲಿ ರೈತರು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸುವಂತಾಗಬೇಕು ಎಂದರು. ಇದನ್ನೂ ಓದಿ: ದೆಹಲಿ ಅಂಗಳದಲ್ಲಿ ಡಿಕೆ ಬ್ರದರ್ಸ್ ಕಸರತ್ತು!
ಕೃಷಿ ಲಾಭದಾಯಕಗೊಳಿಸಲು ಸರ್ಕಾರದ ಯೋಜನೆಗಳು
ಭಾರತ ದೇಶ ಕೃಷಿಪ್ರಧಾನ ದೇಶ. ಕೃಷಿಯನ್ನು ಸುಸ್ಥಿರಗೊಳಿಸುವುದು ಹಾಗೂ ಲಾಭದಾಯಕಗೊಳಿಸುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ. ಇಂದಿನ ಯುವಜನತೆ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಕೃಷಿ ಲಾಭದಾಯಕವಾದರೆ ಯುವಜನತೆ ಸಹಜವಾಗಿ ಕೃಷಿಯತ್ತ ಮುಖಮಾಡುತ್ತಾರೆ. ಸರ್ಕಾರ ಕೃಷಿಯನ್ನು ಲಾಭದಾಯಕಗೊಳಿಸಲು ಹಲವು ಯೋಜನೆಗಳನ್ನು ರೂಪಿಸಿ, ಈ ಉದ್ದೇಶಕ್ಕೆ ಕೈಗಾರಿಕೆಗಳೂ ಕೈಜೋಡಿಸಬೇಕು ಎಂದರು.
