ಬೆಂಗಳೂರು: ಸುಖವಿರಲಿ ದುಃಖವಿರಲಿ ಎಂತಹ ಸಂಕಷ್ಟದಲ್ಲೂ ಸಹನೆ ಮತ್ತು ತಾಳ್ಮೆಯನ್ನು ಕಳೆದುಕೊಳ್ಳದೆ ನಗುಮುಖದಿಂದಲೇ ಎಲ್ಲರನ್ನೂ ಗಮನ ಸೆಳೆಯುತ್ತಿದ್ದ ಏಕೈಕ ವ್ಯಕ್ತಿ ಎಂದರೆ ಮೇರು ನಟ ಡಾ. ರಾಜಕುಮಾರ್ ರವರು ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವೀ ಸೂರ್ಯ ಹೊಗಳಿದರು.
ಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಾಂತಿ ಉಪಹಾರ ಹೋಟೆಲ್ ಎದುರು ಡಾ. ರಾಜ್ ಅಭಿಮಾನಿ ಬಳಗದ ವತಿಯಿಂದ ನಿರ್ಮಿಸಿರುವ ಡಾ.ರಾಜ್ ಕುಮಾರ್ ಪುತ್ಥಳಿಯ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಇಂದು (ಶುಕ್ರವಾರ ಏ 24) ಮಾತನಾಡಿದ ಅವರು, ವೀರಪ್ಪನ್ ಡಾ. ರಾಜ್ ಕುಮಾರಣ್ಣ ಅಪಹರಣ ಮಾಡಿದ ಸಂದರ್ಭದಲ್ಲಿಯೂ ಕೂಡ ವಿಚಲಿತಗೊಳ್ಳದೆ ಎಂತಹ ಕಷ್ಟ ಬಂದರೂ ನಗುಮುಖದಿಂದಲೇ ಎಲ್ಲವನ್ನೂ ಎದುರಿಸುತ್ತಿದ್ದರು.
ಕ್ಷೇತ್ರದ ಶಾಸಕ ಸಿ. ಕೆ ರಾಮಮೂರ್ತಿ ಮಾತನಾಡಿ, ಪೌರಾಣಿಕ, ಸಾಮಾಜಿಕ, ದೇವರ ಪಾತ್ರಗಳು ಎಂತಹ ಪಾತ್ರಗಳಿದ್ದರೂ ಲೀಲಾಜಾಲವಾಗಿ ನಟನೆ ಮಾಡುತ್ತಿದ್ದ ಏಕೈಕ ವ್ಯಕ್ತಿ ಯಾರಾದರೂ ಇದ್ದರೆ ಅದು ಡಾ. ರಾಜ್ಕುಮಾರ್ ಮಾತ್ರ ಎಂದು ಬಣ್ಣಿಸಿದರು.
ಅವರ ಹೋರಾಟದ ಸಾಧನೆ ಸಾವಿರ ವರ್ಷ ಕಳೆದರೂ ಉಳಿಯಬೇಕಾದರೆ ಪುತ್ಥಳಿಗಳ ನಿರ್ಮಾಣದಿಂದ ಸಾಧ್ಯವಾಗುತ್ತದೆ ಅದು ಮುಂದಿನ ಪೀಳಿಗೆಗೂ ಮಾದರಿಯಾಗಿರುತ್ತದೆ ಎಂದು ಹೇಳಿದರು.
ನಂತರ ಪುನೀತ್ ರಾಜಕುಮಾರ್ ಮಾತನಾಡಿ ಡಾ.ರಾಜಕುಮಾರ್ ಅವರು ನಟನೆಯಲ್ಲಿ ಮಹಾನ್ ಸಾಧಕರಾದರೆ ಮನೆಯಲ್ಲಿ ಅಥವಾ ಸಾಮಾನ್ಯ ಜನರ ಹತ್ತಿರ ಮುದ್ದುಮುಖದ ಸಾದು, ನಾನೊಬ್ಬ ಮಹಾನ್ ನಟ ಎಂಬ ಯಾವುದೇ ರೀತಿಯ ಹಮ್ಮಿರಲಿಲ್ಲ, ಬಡವ ಬಲ್ಲಿದರೆನ್ನದೆ ಎಲ್ಲರನ್ನೂ ಸಮಾಜ ಸಮಾನವಾಗಿ ಕಾಣುವ ಏಕೈಕ ವ್ಯಕ್ತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಕೃಷಿ ತಂತ್ರಜ್ಞಾನದಲ್ಲಿಯೂ ಬೆಂಗಳೂರು ರಾಜಧಾನಿಯಾಗಬೇಕು
ಈ ಸಂದರ್ಭದಲ್ಲಿ ಮಾಜಿ ಬಿಬಿಎಂಪಿ ಸದಸ್ಯರುಗಳು ಹಾಗೂ ಡಾ. ರಾಜಕುಮಾರ್ ಅಭಿಮಾನಿಗಳ ಕನ್ನಡ ಬಳಗದ ಅಧ್ಯಕ್ಷರಾದ ಶ್ರೀ ಬಾಬುರವರು ಮತ್ತು ಅಭಿಮಾನಿಗಳು ಉಪಸ್ಥಿತರಿದ್ದರು.
