ಸೆರೆಮನೆಯಂತಾದ ಅನಧೀಕೃತ ಕೋಚಿಂಗ್, ವಸತಿ ಶಾಲೆಗಳು
ಶಹಾಪುರ: ನಗರದಲ್ಲಿ ಬೇಸಿಗೆ ಆರಂಭವಾಯಿತು ಅಂದರೆ ನವೋದಯ, ಸೈನಿಕ ಪರೀಕ್ಷೆಗಳ ಹೆಸರಿನಲ್ಲಿ ಅನಧೀಕೃತ ಕೋಚಿಂಗ್, ಶಾಲೆ ಸೇರಿ ಇತರೆ ವಸತಿ ಶಾಲೆಗಳ ಹಾವಳಿ ಹೆಚ್ಚಳವಾಗಲಿದೆ. ಇದಕ್ಕೆ ಲಗಾಮು ಇಲ್ಲದಂತಾಗಿದ್ದು, ಮನಸ್ಸಿಗೆ ಬಂದಂತೆ ಶಾಲಾ ಶುಲ್ಕ ಪಡೆದು ಪೋಷಕರನ್ನು ವಂಚಿಸುವುದರ ಜೊತೆಗೆ ಉರಿ ಬಿಸಿಲಿನಲ್ಲಿ ಮಕ್ಕಳನ್ನು ಹಿಂಶಿಸಲಾಗುತ್ತಿದೆ ಎಂದು ನಮ್ಮ ಕರ್ನಾಟಕ ಸೇನೆಯ ತಾಲೂಕ ಅಧ್ಯಕ್ಷ ಸಿದ್ದು ಪಟ್ಟೇದಾರ ಆರೋಪಿಸಿದ್ದಾರೆ.
ಅಕ್ರಮ, ಅನಧೀಕೃತ ಕೊಚಿಂಗ್, ವಸತಿ ಶಾಲೆಗಳು ಮುಚ್ಚವಂತೆ ನಮ್ಮ ಕರ್ನಾಟಕ ಸೇನೆಯ ವತಿಯಿಂದ ನಿರಂತರ ಹೋರಾಟಗಳು ನಡೆಯುತ್ತಲೇ ಇವೆ. ಮಕ್ಕಳ ಹಕ್ಕುಗಳನ್ನು ಕಸಿದುಕೊಳ್ಳುವುದರ ಜೊತೆಗೆ ಗಲ್ಲಿಯಲ್ಲೊಂದು ಅಕ್ರಮ ಕೋಚಿಂಗ್ ಸೆಂಟರ್‌ಗಳು ಹುಟ್ಟಿಕೊಂಡಿವೆ. ಮೊದಲೇ ಓದು ಪರೀಕ್ಷೆ ಎಂದು ಮಾನಸಿಕ ಶ್ರಮದಿಂದ ಬಸವಳಿಯುವ ಮಕ್ಕಳಿಗೆ ಬೇಸಿಗೆ ರಜೆಯ ವಿರಾಮ ಸಮಯವೂ ಶಿಕ್ಷೆಗೆ ಗುರಿಪಡಿಸಿದಂತಾಗುತ್ತಿದೆ. ಸರ್ಕಾರ ಪರವಾನಗಿ ಇಲ್ಲದೇ ಬೇಸಿಗೆ ವಿಶೇಷ ತೆರಗತಿ ನಡೆಸುವ ಹೆಸರಿನಲ್ಲಿ ರಾಜಾರೋಷವಾಗಿ ಪ್ರತಿವರ್ಷವೂ ಅನಧಿಕೃತ ಕೋಚಿಂಗ್ ಸೆಂಟರ್‌ಗಳು ತಲೆ ಎತ್ತುತಲೆ ಇವೆ. ಈ ಬಾರಿ ತಾಲೂಕಿನಲಿ ತಾಪಮಾನ ೪೨ ಡಿಗ್ರಿ ಸೆಲ್ಸಿಯಸ್ ದಾಟಿದೆ. ಇಂತಹ ಬಿಸಿಗಾಳಿಯ ಆಘಾತದಲ್ಲಿದ್ದು, ಇಂತಹ ವಾತವರಣದಲ್ಲಿ ಕೇಲವೆಡೆ ಟೀನ್ ಶೇಡ್‌ಗಳಲ್ಲಿ ವಸತಿ ನಡೆಸುತ್ತಿದ್ದಾರೆ. ಆದ್ದರಿಂದ ಪೋಷಕರು ಸಹ ಮಕ್ಕಳನ್ನು ಶಾಲೆಗೆ ಸೇರಿಸುವ ಮುನ್ನ ಎಚ್ಚರ ವಹಿಸಬೇಕು.
ಮಕ್ಕಳ ಭವಿಷ್ಯದ ಜೊತೆಗೆ ಚೆಲ್ಲಾಟ ವಾಡುತ್ತಿರುವ ಅನಧೀಕೃತ ಕೋಚಿಂಗ್, ವಸತಿ ಶಾಲೆಗಳ ವಿರುದ್ಧ ಕ್ರಮಕ್ಕೆ ಮುಂದಾಗದ ಅಧಿಕಾರಿಗಳಿಗೆ ಎಷ್ಟೇ ಛೀಮಾರಿ ಹಾಕಿದರು ಕ್ರಮಕ್ಕೆ ಮುಂದಾಗುತ್ತಿಲ್ಲಾ ಎಂದು ಆಕ್ರೋಶ ಹೊರಹಾಕಿದರು.
ನಿಯಮ ಬಾಹಿರವಾಗಿ ಮಕ್ಕಳಿಗೆ ತರಬೇತಿ ನೀಡಲಾಗುತ್ತಿದ್ದು, ಮೂಲ ಸೌಲಭ್ಯ, ಸರಿಯಾದ ಗಾಳಿ, ಬೆಳಕು ಇರದ ಕೊಠಡಿಗಳಲ್ಲಿ ಮಕ್ಕಳನ್ನು ಕೂಡಿಸಿ ಹಿಂಸೆ ನೀಡಲಾಗುತ್ತಿದೆ. ಮಕ್ಕಳ ದಾಖಲಾತಿ ಯಾವ ಶಾಲೆಯಲ್ಲಿದೆ. ಮಕ್ಕಳ ಹಾಜರಾತಿ ಯಾವ ಶಿಕ್ಷಕರು ಹಾಕುತ್ತಿದ್ದಾರೆ ಎಂಬ ಮಾಹಿತಿ ಪಡೆದು ಅವರ ವಿರುದ್ಧ ಸೂಕ್ತ ಕ್ರಮ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಬೇಸಿಗೆ ಬಂತು ಅಂದರೆ ಕೋಚಿಂಗ್ ಹೆಸರಿನಲ್ಲಿ ಬೇಸಿಗೆ ಶಿಬಿರ ಪ್ರಾರಂಭಿಸಿ ಮಕ್ಕಳನ್ನು ಸೆರೆಮನೆಯಂತಾದ ಕೂಪಕ್ಕೆ ತಳ್ಳಲಾಗುತ್ತಿದೆ. ಬೇಸಿಗೆ ಶಿಬಿರಗಳಿಗೆ ಸೇರಿಸುವ ಧಾವಂತದಲ್ಲಿ ಪಾಲಕರು ತಪ್ಪು ಹೆಜ್ಜೆಗಳನ್ನು ಇಡುತ್ತಿದ್ದು, ಇದರಿಂದ ಮಕ್ಕಳು ಸಜೆ ಅನುಭವಿಸಬೇಕಾಗಿದೆ. ಪಾಲಕರ ಮನೋಭಾವವನ್ನು ಬಂಡವಾಳ ಮಾಡಿಕೊಂಡು ಮಕ್ಕಳನ್ನು ಸೆರೆಮನೆಯಂತಿರುವ ಅಕ್ರಮ ಕೋಚಿಂಗ್ ಕೂಪಕ್ಕೆ ತಳ್ಳಲಾಗುತ್ತಿದ್ದು, ಈ ಬಗ್ಗೆ ಶಿಕ್ಷಣ ಇಲಾಖೆಯ ಸಚಿವರೇ ಬಂದು ನೋಡುಬೇಕಾದ ಅನಿವಾರ್ಯ ಉದ್ಬವಿಸಿದೆ.
ಕೈಕಟ್ಟಿ ಕುಳಿತ ಜಿಲ್ಲಾಡಳಿತ
ಅಕ್ರಮ, ಅನಧೀಕೃತ ಕೋಚಿಂಗ್ ವಸತಿ ಶಾಲೆಗಳ ವಿರುದ್ಧ ಹೋರಾಟಗಳು ನಡೆಯುತ್ತಲೇ ಇದ್ದು, ಜಿಲ್ಲಾಡಳಿತದ ಗಮನಕ್ಕೂ ಇರುವ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸದ ಕಾರಣ ಅಧಿಕಾರಗಳು, ಅನಧೀಕೃತ ಕೋಚಿಂಗ್ ಮಾಲೀಕರ ಒಳಒಪ್ಪಂದಕ್ಕೆ ಇಡೀ ವ್ಯವಸ್ಥೆಯ ಮೇಲೆ ಅನುಮಾನ ಪಡುವಂತಾಗಿದೆ ಎಂದು ಪ್ರಜ್ಞಾವಂತ ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
