ವಿಜಯಪುರ: ಹಲವಾರು ಆರೋಪಗಳ ಮೇಲೆ ಪಂಚಮಸಾಲಿ ಗುರುಪೀಠದಿಂದ ವಚನಾನಂದ ಸ್ವಾಮೀಜಿಯವರನ್ನ ಉಚ್ಛಾಟನೆ ಮಾಡಲಾಗಿದ್ದು, ಇದೀಗ ಉಚ್ಛಾಟನೆ ಕುರಿತು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪ್ರತಿಕ್ರಿಯಿಸಿದ್ದಾರೆ.
ವಿಜಯಪುರದಲ್ಲಿ ಇಂದು (ಮಂಗಳವಾರ ಏಪ್ರಿಲ್ 14) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಚನಾನಂದ ಸ್ವಾಮೀಜಿ ಸತ್ಯಹರಿಶ್ಚಂದ್ರರಲ್ಲ. ಅವರು ಎರಡು ಟ್ರಸ್ಟ್ ಗಳಲ್ಲಿ ಖಾಸಗಿ ಆಸ್ತಿಯನ್ನು ಮಾಡಿಕೊಂಡಿದ್ದಾರೆ ಎಂದು ಕಿರಿಕರಿದರು.
ಇಂಥ ಗುರು ಪೀಠದ ಸ್ವಾಮೀಜಿಯವರ ದುರಾಡಳಿತದಿಂದ ಸಮಾಜಕ್ಕೆ ನ್ಯಾಯ ಸಿಗಲ್ಲ. ಪ್ರಾಮಾಣಿಕರು, ಸಮಾಜಕ್ಕಾಗಿ ಕೆಲಸ ಮಾಡುವವರು ಯಾರು ಟ್ರಸ್ಟ್‌ನಲ್ಲಿ ಇಲ್ಲ. ಉಚ್ಚಾಟನೆ ಮಾಡಿದವರು, ಮಾಡಿಸಿಕೊಂಡವರು ಎಲ್ಲರೂ ಒಂದೇ ರೀತಿಯಾಗಿದ್ದಾರೆ. ಸಾಮಾಜಿಕ ಕಳಕಳಿಯಿಲ್ಲ, ಸರ್ಕಾರವನ್ನು ಬ್ಲ್ಯಾಕ್ ಮೇಲ್ ಮಾಡುವುದಕ್ಕೆ ಈ ಟ್ರಸ್ಟ್‌ಗಳು ಇದ್ದಂತೆ ಆಗಿದೆ ಎಂದರು.
ಅಲ್ಲದೆ ಹಿಂದೆ ಯಡಿಯೂರಪ್ಪ ಸರ್ಕಾರವಿದ್ದಾಗ 11 ಕೋಟಿ ರೂ. ಹಣ ಕೊಟ್ಟಿದ್ದಾರೆ. ಗ್ರಾಮ ಪಂಚಾಯತ್ ಪಿಡಿಓ ಸಹಿ ಕೂಡ ನಕಲಿ ಮಾಡಿದ್ದಾರೆ. ಹೀಗಿದ್ದಾಗ ಈ ಟ್ರಸ್ಟ್‌ನ್ನು ಹೇಗೆ ನಂಬುತ್ತೀರಿ, ಇವರು ಹೇಗೆ ಸಮಾಜಕ್ಕೆ ಒಳ್ಳೆಯದು ಮಾಡ್ತಾರೆ. ಈ ಕೂಡಲಸಂಗಮ ಟ್ರಸ್ಟ್ ಕೂಡ ಅದು ಒಂದು ಖಾಸಗಿ ಆಸ್ತಿ ಆಗಿದೆ. ಈ ಎರಡು ಟ್ರಸ್ಟ್‌ಗಳ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ಧಾನಸಭೆಯಲ್ಲಿ ಇದನ್ನ ಪ್ರಸ್ತಾಪ ಮಾಡಬೇಕು ಅಂದುಕೊಂಡೆ.
ಆದರೆ ನಮ್ಮದೇ ಸರ್ಕಾರ ಇದ್ದರೂ ಸ್ಪೀಕರ್‌ಗೆ ಹೇಳಿ ಇದು ಚರ್ಚೆಗೆ ಬಾರದಂತೆ ತಡೆದರು. ಈ ಟ್ರಸ್ಟ್ನವರು ಬ್ಲ್ಯಾಕ್ ಮೇಲ್ ಮಾಡಿದ್ದಾರೆ. ನಮ್ಮ ಸಮಾಜದವರ 1 ಕೋಟಿ ಮತಗಳಿವೆ ಎಂದು ಬ್ಲ್ಯಾಕ್ ಮೇಲ್ ಮಾಡಿದರು ಎಂದು ತಿಳಿಸಿದರು.
