Screenshot
ಬೆಂಗಳೂರು: ದಕ್ಷಿಣ ಕಾಶಿ ಖ್ಯಾತಿಯ ಹುಳಿಮಾವು ಶ್ರೀ ಸ್ಫೂರ್ತಿ ವಿನಾಯಕ ಸಹಿತ ಶ್ರೀ ಸತ್ಯನಾರಾಯಣ ಸ್ವಾಮಿ ದೇವಾಲಯದ 21ನೇ ವರ್ಷದ ವಾರ್ಷಿಕೋತ್ಸವ ಹಾಗೂ ಬ್ರಹ್ಮರಥೋತ್ಸವ ಅಂಗವಾಗಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಫೆಬ್ರವರಿ 22ರಿಂದ ಮಾರ್ಚ್ 2ರವರೆಗೆ ನಡೆಯಲಿವೆ ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.
ಆಗಮಿಕ ಹರ್ಷವರ್ಧನ್, ಪ್ರಧಾನ ಅರ್ಚಕ ವೈ.ಲಕ್ಷ್ಮೀಕಾಂತ ಭಟ್ಟಾಚಾರ್ಯ ಅವರ ಮುಂದಾಳತ್ವದಲ್ಲಿ ದೇವಾಲಯದಲ್ಲಿ ಪಾಂಚರಾತ್ರ ಆಗಮೋಕ್ತ ವಿಧಾನದಲ್ಲಿ ನವದಿನಗಳ ಕಾಲ ವಿವಿಧ ಪೂಜಾ ಕಾರ್ಯಕ್ರಮಗಳು, ಬ್ರಹ್ಮರಥೋತ್ಸವ, ವಾಹನೋತ್ಸವಗಳು ಹಾಗೂ ದಿವ್ಯ ಕಲ್ಯಾಣೋತ್ಸವ ಸೇರಿದಂತೆ ವೈಭವಯುತ ಧಾರ್ಮಿಕ ಆಚರಣೆಗಳು ನಡೆಯಲಿವೆ. ಜೊತೆಗೆ ಪಲ್ಲಕ್ಕಿ ಉತ್ಸವ, ವಾದ್ಯಮೇಳ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.
ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ. ವಿಶ್ವ ಒಕ್ಕಲಿಗ ಮಹಾ ಸಂಸ್ಥಾನ ಮಠದ ಶ್ರೀ ನಿಶ್ಚಲಾನಂದ ಸ್ವಾಮಿ, ಸಂಸದ ತೇಜಸ್ವಿಸೂರ್ಯ, ಶಾಸಕ ಸತೀಶ್ ರೆಡ್ಡಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಹುಳಿಮಾವು ಕ್ಷೇತ್ರದ ಆಧ್ಯಾತ್ಮಿಕ ಪರಂಪರೆ ಹಾಗೂ ಬ್ರಹ್ಮರಥೋತ್ಸವದ ವೈಭವವನ್ನು ರಾಜ್ಯದ ಜನತೆಗೂ ಪರಿಚಯಿಸುವ ಉದ್ದೇಶದಿಂದ ಗಣ್ಯರನ್ನು ಆಹ್ವಾನಿಸಲಾಗುತ್ತಿದೆʼ ಎಂದು ಟ್ರಸ್ಟಿ ವೇಣುಗೋಪಾಲ ತಿಳಿಸಿದರು.
