ಬೆಂಗಳೂರು: ಕನಕದಾಸರು, ಸಿದ್ದರಾಮೇಶ್ವರ, ವಾಲ್ಮೀಕಿ, ಅಂಬೇಡ್ಕರ್ ಸೇರಿದಂತೆ ಹಲವು ಮಹನೀಯರು ಯಾವುದೇ ಒಂದು ಸಮುದಾಯಕ್ಕೆ ಸೇರಿದವರಲ್ಲ. ಇಡೀ ದೇಶವೇ ಅವರನ್ನು ನೆನೆಯುತ್ತದೆ. ಅಂತಹದ್ದರಲ್ಲಿ, ನಾವು ಮಹನೀಯರ ಜಯಂತಿಗಳನ್ನು ಒಂದು ಸಮುದಾಯಕ್ಕೆ ಸಿಮೀತಗೊಳಿಸಿರುವುದು ಸರಿಯಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ್ ತಂಗಡಗಿ ಅವರು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಶ್ರೀ ಬಸವಹರಳಯ್ಯ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ನಡೆದ ಕಾಯಕ ಶರಣರ ಜಯಂತಿಯಲ್ಲಿ ಪ್ರೊ.ಎಚ್. ಲಿಂಗಪ್ಪ ಅವರಿಗೆ ಕಾಯಕ ಶರಣಶ್ರೀ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಪ್ರೊ.ಲಿಂಗಪ್ಪ ಅವರನ್ನು ‘ಕಾಯಕ ಶರಣಶ್ರೀ’ ಪ್ರಶಸ್ತಿಗೆ ಆಯ್ಕೆ ಮಾಡಿದ್ದಕ್ಕೆ, ಸಮುದಾಯದ ಮುಖಂಡರೊಬ್ಬರು ನಮ್ಮ ಸಮಾಜದವರಿಗೆ ಪ್ರಶಸ್ತಿ ನೀಡಬೇಕಿತ್ತು ಎಂದು ನನಗೆ ಕರೆ ಮಾಡಿದ್ದರು. ಅದು ನನಗೆ ನೋವು ತರಿಸಿತು. ಕಳೆದ ಬಾರಿ ನಾವು ಕನಕ ಶ್ರೀ ಪ್ರಶಸ್ತಿಯನ್ನು ಬ್ರಾಹ್ಮಣ ಸಮುದಾಯದ, ಸಮ- ಸಮಾಜದ ಬಗ್ಗೆ ಒಲವು ಹೊಂದಿದ್ದವರಿಗೆ ನೀಡಿದ್ದೆವು. ಇಲ್ಲಿ ಯಾವುದೇ ಜಾತಿ ಮುಖ್ಯವಲ್ಲ, ಅವರ ತತ್ವ ಸಿದ್ಧಾಂತಗಳು ಮುಖ್ಯ ಎಂದರು.
ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವ ಸಿದ್ಧಾಂತದ ಮೇಲೆ ಬದುಕು ನಡೆಸುತ್ತಿರುವ ಪ್ರೊ.ಲಿಂಗಪ್ಪ ಅವರನ್ನು ಕಾಯಕಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ಸಂತಸ ತರಿಸಿದೆ. ಐವರು ಶರಣರಾದ ಮಾದರ ಚೆನ್ನಯ್ಯ, ಮಾದರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಹಾಗೂ ಉರಿಲಿಂಗಪೆದ್ದಿ ಅವರು ಬಸವಣ್ಣ ಅವರ ಸಮ-ಸಮಾಜದ ಮೇಲೆ ನಂಬಿಕೆ ಇಟ್ಟವರು. ಜಾತ್ಯತೀತೆಯನ್ನು ಪ್ರತಿಪಾದಿಸುತ್ತಾ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
ಇನ್ನು ಸಮಾಜದ ವಿವಿಧ ಸ್ತರಗಳಿಂದ ಬಂದ ಪ್ರತಿಯೊಬ್ಬ ವಚನಕಾರರೂ ತಮ್ಮ ಕಾಯಕಗಳನ್ನು ಮಾಡುತ್ತಲೇ, ತಮ್ಮ ಜೀವನಾನುಭವಗಳನ್ನು ವಚನಗಳ ಮೂಲಕ ಹಾಡಿ ಈ ಲೋಕಕ್ಕೆ ಬಹುದೊಡ್ಡ ಉಪಕಾರ ಮಾಡಿದ್ದಾರೆ ಎಂದರು. ಇದನ್ನೂ ಓದಿ: ವಿಧಾನಸೌಧದಲ್ಲಿ ಚಿನ್ನ-ಹಣದ ಬ್ಯಾಗ್ ನಾಪತ್ತೆ ಗೃಹ ಸಚಿವರು ಹೇಳಿದ್ದೇನು?
ಈ ಸಂದರ್ಭದಲ್ಲಿ ಸಚಿವರಾದ ಆರ್. ಬಿ.ತಿಮ್ಮಾಪುರ್, ರಾಜ್ಯಸಭಾ ಮಾಜಿ ಸಂಸದರಾದ ಡಾ.ಎಲ್.ಹನುಮಂತಯ್ಯ, ಅಖಿಲ ಕರ್ನಾಟಕ ಡೋಹರ ಕಕ್ಕಯ್ಯ ಸಮಾಜದ ಅಧ್ಯಕ್ಷ ಸಂತೋಷ್ ಸುರೇಂದ್ರ ಸವಣೂರು, ಮಾದಿಗ ಸಮುದಾಯದ ಎಂ.ಗುರುಮೂರ್ತಿ, ಆದಿಜಾಂಬವ ಸಮಾಜದ ಸಿದ್ದರಾಜು, ಇಲಾಖಾ ಕಾರ್ಯದರ್ಶಿ ಜೆ.ಮಂಜುನಾಥ್, ಇಲಾಖೆ ನಿರ್ದೇಶಕಿ ಕೆ.ಎಂ.ಗಾಯಿತ್ರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
