ಮಹದೇವಪುರ: ಮಾಜಿ ಸಚಿವ, ಮಹದೇವಪುರ ಟಾಸ್ಕ್ ಫೋರ್ಸ್ ಅಧ್ಯಕ್ಷ ಅರವಿಂದ ಲಿಂಬಾವಳಿ ಅವರ 59ನೇ ಹುಟ್ಟುಹಬ್ಬದ ಪ್ರಯುಕ್ತ ಹೂಡಿ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಪಕ್ಷದ ಬೆಂಬಲಿಗರು ಹಾಗೂ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಶುಕ್ರವಾರ ಹೊನಲು ಬೆಳಕು ರಾಜ್ಯಮಟ್ಟದ ಪುರುಷ ಹಾಗೂ ಮಹಿಳಾ ಕಬಡ್ಡಿ ಪಂದ್ಯಾವಳಿಗೆ ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕ್ರೀಡೆಗಳು ಯುವಜನರಲ್ಲಿ ಶಿಸ್ತು, ದೈಹಿಕ ಕ್ಷಮತೆ ಹಾಗೂ ತಂಡಭಾವನೆ ಬೆಳೆಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ ಎಂದು ಹೇಳಿದರು.
ಕಬಡ್ಡಿ ನಮ್ಮ ದೇಶದ ಪರಂಪರೆಯ ಕ್ರೀಡೆಯಾಗಿದ್ದು, ಗ್ರಾಮೀಣ ಭಾಗದಿಂದ ಅಂತರರಾಷ್ಟ್ರೀಯ ಮಟ್ಟದವರೆಗೆ ಬೆಳೆಯುತ್ತಿರುವುದು ಹೆಮ್ಮೆಯ ವಿಷಯ ಎಂದರು.
ರಾಜ್ಯಮಟ್ಟದ ಈ ಪಂದ್ಯಾವಳಿಯಲ್ಲಿ ಮಹಿಳಾ ವಿಭಾಗದಲ್ಲಿ ಬೆಂಗಳೂರು ನಗರ, ದಕ್ಷಿಣ ಕನ್ನಡ, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು, ಬೆಂಗಳೂರು ದಕ್ಷಿಣ, ಬೆಳಗಾವಿ ಹಾಗೂ ಮೈಸೂರು ಜಿಲ್ಲೆಗಳ ತಂಡಗಳು ಭಾಗವಹಿಸಿದ್ದವು.
ಪುರುಷರ ವಿಭಾಗದಲ್ಲಿ ಬೆಂಗಳೂರು ನಗರ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಬೆಳಗಾವಿ, ಕೋಲಾರ, ಧಾರವಾಡ ಮತ್ತು ದಾವಣಗೆರೆ ಜಿಲ್ಲೆಗಳ ತಂಡಗಳು ಕಣಕ್ಕಿಳಿದವು.
ಈ ಪಂದ್ಯಾವಳಿಗಳು ಮೂರು ದಿನ ನಡೆಯಲಿದ್ದು ವಿಜೇತರಿಗೆ ಒಂದನೇ ತಾರೀಖು ಮಾಜಿ ಸಚಿವರು ಬಹುಮಾನಗಳನ್ನು ವಿತರಿಸಲಿದ್ದಾರೆ ಎಂದು ಕಾರ್ಯಕ್ರಮದ ಆಯೋಜಿಕ ಹೂಡಿ ಪಿಳ್ಳಪ್ಪ ತಿಳಿಸಿದ್ದಾರೆ.
ಮೊದಲನೇ ಬಹುಮಾನವಾಗಿ ಟ್ರೋಫಿಯೊಂದಿಗೆ ₹75,000 ನಗದು ಬಹುಮಾನ, ಎರಡನೇ ಬಹುಮಾನವಾಗಿ ಟ್ರೋಫಿಯೊಂದಿಗೆ ₹50,000 ನಗದು ಬಹುಮಾನ ಹಾಗೂ ಮೂರನೇ ಬಹುಮಾನವಾಗಿ ಟ್ರೋಫಿಯೊಂದಿಗೆ ₹25,000 ನಗದು ಬಹುಮಾನ ನೀಡಲಾಗುತ್ತದೆ.
ಕಾರ್ಯಕ್ರಮದಲ್ಲಿ ಸ್ಥಳೀಯ ಕ್ರೀಡಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪಂದ್ಯಾವಳಿಗೆ ಮೆರುಗು ತಂದರು.
