ಬೆಂಗಳೂರು: ಕೇರಳದ ಚುನಾವಣೆಯ ಕಾವು ಕರ್ನಾಟಕದಲ್ಲಿ ಏನು ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸಚಿವೆ ಕು. ಶೋಭಾ ಕರಂದ್ಲಾಜೆ ಅವರು ಪ್ರಶ್ನಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು (ಮಂಗಳವಾರ ಡಿ. 30) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕಕ್ಕೆ ಹೊರದೇಶಗಳಿಂದ ಅಕ್ರಮ ವಲಸೆ ಬರುತ್ತಿರುವವರ ಕುರಿತು ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ಡ್ರಗ್ ಮಾಫಿಯ ನಿರತ ಅಕ್ರಮ ವಲಸಿಗರ ವಿರುದ್ಧ ಎಲ್ಲ ಇಲಾಖೆಗಳು ಸೇರಿ ಕ್ರಮ ಕೈಗೊಳ್ಳಲಿ ಎಂದು ವಿನಂತಿಸಿದರು. ರಾಜ್ಯ ಸರಕಾರವೂ ರೋಹಿಂಗ್ಯಾಗಳನ್ನು ಪತ್ತೆ ಹಚ್ಚಿ ಹೊರಹಾಕಲು ಸಹಕರಿಸಬೇಕಿದೆ ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ಯಾರ ಸರಕಾರ ನಡೆಯುತ್ತಿದೆ. ಯಾರಿಗಾಗಿ ಸರಕಾರ ನಡೆಯುತ್ತಿದೆ ಎಂದು ಪ್ರಶ್ನಿಸಿದರು. ರಾಜ್ಯದ ಮೂಗುದಾರ ಎಲ್ಲಿದೆ? ಕೆ.ಸಿ.ವೇಣುಗೋಪಾಲ್ ಅವರು ಕರ್ನಾಟಕದ ವಿಚಾರದಲ್ಲಿ ಮೂಗು ತೂರಿಸುತ್ತಾರೆ. ಟ್ವೀಟ್ ಮಾಡಿ ಸರಕಾರ ಹೇಗೆ ನಡೆಸಬೇಕೆಂದು ಕಿವಿಮಾತು ಹೇಳಿದ್ದಾರೆ. ಅವರದೇ ರಾಜ್ಯದ ಪಿಣರಾಯಿ ವಿಜಯನ್ ಕರ್ನಾಟಕದಲ್ಲಿ ಏನು ಮಾಡಬೇಕು, ಏನು ಮಾಡಬಾರದೆಂದು ಹೇಳುತ್ತಿದ್ದಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಅರ್ಹ ಬಡವರಿಗೆ ಯಾವುದೇ ಅನ್ಯಾಯವಾಗದಂತೆ ನಾವು ಕ್ರಮ ಕೈಗೊಳ್ಳುತ್ತೇವೆ: ಡಿಕೆಶಿ
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಶಿವಕುಮಾರರಿಗೆ ಸರಕಾರ ನಡೆಸಲು ಸಾಂವಿಧಾನಿಕ ಹಕ್ಕು, ಶಕ್ತಿ ಇದೆಯೇ ಇಲ್ಲವೇ? ಎಂದು ಕೇಳಿದರು. ಕೋಗಿಲು ಅಕ್ರಮ ವಲಸಿಗರನ್ನು ನೋಟಿಸ್ ಕೊಟ್ಟು 167 ಮನೆಗಳನ್ನು ತೆರವುಗೊಳಿಸಿದ್ದು ಒಳ್ಳೆಯ ಕೆಲಸ. ತೆರವನ್ನು ಕೆ.ಸಿ.ವೇಣುಗೋಪಾಲ್ ಪ್ರಶ್ನಿಸಿದ್ದಾರೆ. ಪಿಣರಾಯಿ ವಿಜಯನ್ ಒತ್ತಡ ತರುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಈ ವಲಸಿಗರು ಯಾರು? ಎಂದು ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದರು. ಅಲ್ಲಿದ್ದವರೆಲ್ಲ ಪಶ್ಚಿಮ ಬಂಗಾಲದಿಂದ ಬಂದವರು. ಅಲ್ಲಿಯೂ ಸಮರ್ಪಕ ವಿಳಾಸ ಇಲ್ಲದವರು. ಹೆಬ್ಬಾಳದ ಅಮೀನ್‍ಕೆರೆಯಲ್ಲಿ ವಾಸ ಮಾಡುವವರು, ಅಕ್ರಮ ಚಟುವಟಿಕೆ ಮಾಡುವವರು ಯಾರೆಂದು ಪೊಲೀಸ್ ಕಮೀಷನರ್‍ಗೆ ಪತ್ರ ಬರೆದಿದ್ದೇನೆ. ಕ್ರಮ ಕೈಗೊಳ್ಳಲು ಹೇಳಿದ್ದೆ. ಅದೇರೀತಿಯ ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದವರನ್ನು ಕೋಗಿಲುವಿನಲ್ಲಿ ತೆರವು ಮಾಡಿದ್ದಾರೆ ಎಂದು ವಿವರಿಸಿದರು.
