ಬೆಂಗಳೂರು: ಬೆಂಗಳೂರಿನ ವಾಸಿಂ ಬಡಾವಣೆ, ಫಕೀರ್ ಬಡಾವಣೆಯಲ್ಲಿ ಯಾರಿದ್ದಾರೆ? ದೆಹಲಿ ಒತ್ತಡಕ್ಕೆ ಮಣಿದು ಸಿಎಂ, ಡಿಸಿಎಂ ಸಭೆ ನಡೆಸುತ್ತಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಪ್ರಶ್ನಿಸಿದ್ದಾರೆ.
ಇಂದು (ಮಂಗಳವಾರ ಡಿ. 30) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹಳ ದಿನದಿಂದ ಅವರು ಒಟ್ಟಾಗಿಲ್ಲ; ಕುರ್ಚಿ ಉಳಿಸಿಕೊಳ್ಳಲು ಒಬ್ಬರು, ಕುರ್ಚಿಯನ್ನು ಪಡೆಯಲು ಒಬ್ಬರು ಸ್ಪರ್ಧೆಯ ಮೇಲೆ ದೆಹಲಿ ಹೈಕಮಾಂಡನ್ನು ಸಂತುಷ್ಟಗೊಳಿಸಲು ಒಟ್ಟಿಗೆ ಸಭೆ ನಡೆಸಿ ತೆರವುಗೊಳಿಸಿ ಅಕ್ರಮ ವಲಸಿಗರಿಗೆ ಬೈಯಪ್ಪನಹಳ್ಳಿಯಲ್ಲಿ ಮನೆ ಕೊಡಲು ನಿರ್ಧರಿಸಿದ್ದಾರೆ. ಯಾರವರು? ಯಾವಾಗ ಅರ್ಜಿ ಸಲ್ಲಿಸಿದ್ದಾರೆ. ಕರ್ನಾಟಕದ ಅರ್ಜಿ ಸಲ್ಲಿಸಿದವರ ಗತಿ ಏನು ಎಂದು ಪ್ರಶ್ನೆಗಳನ್ನು ಮುಂದಿಟ್ಟರು.
ಹಲವೆಡೆ, ಸರಕಾರಿ ಭೂಮಿಗಳಲ್ಲಿ ಇರುವ ಅಕ್ರಮ ವಲಸಿಗರ ಪಟ್ಟಿ ಯಾವಾಗ ತಯಾರು ಮಾಡುತ್ತೀರಿ ಎಂದು ಪ್ರಶ್ನಿಸಿದರು. ಅಮೀನ್ಕೆರೆ ಒಂದು ಸ್ಯಾಂಪಲ್ ಅಷ್ಟೇ. ಅಕ್ರಮ ವಲಸಿಗರಿಗೆ, ರೋಹಿಂಗ್ಯಾಗಳಿಗೆ ಸರಕಾರಿ ಮನೆ ಕೊಟ್ಟರೆ ಬೆಂಗಳೂರು ಏನಾದೀತು ಎಂದು ಆತಂಕ ವ್ಯಕ್ತಪಡಿಸಿದರು. ಕರ್ನಾಟಕ ಸರಕಾರ, ಪೊಲೀಸರು ಅಕ್ರಮ ವಲಸಿಗರ ಗುರುತಿಸುವಿಕೆ ವಿಚಾರದಲ್ಲಿ ಸಹಕಾರ ಕೊಡದೇ ಇದ್ದರೆ ಇವರನ್ನು ಪತ್ತೆ ಮಾಡುವುದು ಹೇಗೆ ಎಂದು ಕೇಳಿದರು.
ಇದನ್ನೂ ಓದಿ: ಕೇರಳದ ಚುನಾವಣೆಯ ಕಾವು ಕರ್ನಾಟಕದಲ್ಲಿ ಏನು ಕೆಲಸ ಮಾಡುತ್ತಿದೆ?: ಶೋಭಾ ಕರಂದ್ಲಾಜೆ
ನೀವೇ ಅವರಿಗೆ ಮನೆ ಕೊಟ್ಟು, ಸರ್ಟಿಫಿಕೇಟ್ ಕೊಟ್ಟು ಅವರನ್ನು ಖಾಯಂ ಮಾಡುತ್ತಿದ್ದೀರಿ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇವರ ಮತದಾರರ ಚೀಟಿ, ಆಧಾರ್ ಕಾರ್ಡನ್ನು ತಕ್ಷಣ ವಶಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು. ಕರ್ನಾಟಕದ ಪೊಲೀಸರು ಆಧಾರ್ ಕಾರ್ಡ್ ವಶಕ್ಕೆ ಪಡೆಯಬೇಕು. ಅವರು ಪಶ್ಚಿಮ ಬಂಗಾಲದವರೇ? ಅಥವಾ ಬೇರೆ ಕಡೆಯಿಂದ ಬಂದಿದ್ದಾರಾ ಎಂದು ಪತ್ತೆ ಮಾಡಬೇಕಿದೆ ಎಂದು ಒತ್ತಾಯಿಸಿದರು. ದೇಶದ ಮತ್ತು ಕರ್ನಾಟಕದ ಉಳಿವಿಗಾಗಿ ಪೊಲೀಸರು ಕ್ರಮ ಕೈಗೊಳ್ಳಲಿ ಎಂದು ಆಗ್ರಹವನ್ನು ಮುಂದಿಟ್ಟರು.
ರಾಜ್ಯಸಭಾ ಸದಸ್ಯ ಲೇಹರ್ ಸಿಂಗ್ ಸಿರೋಯಾ, ವಿಧಾನಪರಿಷತ್ ಸದಸ್ಯ ಕೆ.ಎಸ್. ನವೀನ್, ರಾಜ್ಯ ವಕ್ತಾರ ಎಂ.ಜಿ. ಮಹೇಶ್, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಅವರು ಹಾಜರಿದ್ದರು.
