ಬೆಂಗಳೂರು: ರಾಜ್ಯದಲ್ಲಿ ಕನ್ನಡ ಕಲಿಯದೆಯೇ ಬದುಕಬಹುದಾದ ವಾತಾವರಣವಿದೆ. ಕನ್ನಡ ಕಲಿಯಲೇಬೇಕಾದ ಅನಿವಾರ್ಯತೆ ಇಲ್ಲ. ಬೇರೆ ಭಾಷೆಯಲ್ಲಿ ಮಾತನಾಡುವವರೊಂದಿಗೆ ನಾವು ಕನ್ನಡದಲ್ಲಿಯೇ ಮಾತನಾಡಬೇಕು. ತಮಿಳುನಾಡು, ತೆಲಂಗಾಣ, ಕೇರಳ, ಮಹಾರಾಷ್ಟ್ರ ಹಾಗೂ ಆಂಧ್ರದಲ್ಲಿ ಅವರವರ ಭಾಷೆಯಲ್ಲಿಯೇ ಮಾತನಾಡುತ್ತಾರೆ. ಕನ್ನಡಿಗರು ಏಕೆ ಕನ್ನಡದಲ್ಲಿ ಮಾತನಾಡಬಾರದು? ಕನ್ನಡದಲ್ಲಿಯೇ ಮಾತನಾಡಬೇಕು. ಅನಿವಾರ್ಯವಾದರೆ ಬೇರೆ ಭಾಷೆ ಬಳಸಿ. ಯಾವ ಭಾಷೆ ಕಲಿತರೂ ಕನ್ನಡಿಗರಾಗಿಯೇ ಉಳಿಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಕನ್ನಡ ಚಳವಳಿಗಾರರ ಸಮಿತಿ ಆಯೋಜಿಸಿದ್ದ ಜನರಾಜ್ಯೋತ್ಸವ -2025 ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಭಾಷೆ, ನೆಲ, ಜಲ, ಗಡಿ ಇವುಗಳ ಬಗ್ಗೆ ಹೋರಾಟ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. “ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ಕನ್ನಡವಾಗಿರು” ಎಂದು ಕುವೆಂಪು ಹೇಳಿದ್ದಾರೆ. 1983 ರಲ್ಲಿ ಕನ್ನಡ ಕಾವಲು ಸಮಿತಿ ಅಧ್ಯಕ್ಷನಾಗಿ ನೇಮಕಗೊಂಡು ಒಂದೂವರೆ ವರ್ಷ ಕಾರ್ಯನಿರ್ವಹಿಸಿದ್ದೆ, ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಕನ್ನಡ ಬೆರಳಚ್ಚು ಯಂತ್ರಗಳನ್ನು ಎಲ್ಲೆಡೆ ಕಳುಹಿಸಿದ್ದೆ. ಕನ್ನಡ ಆಡಳಿತ ಭಾಷೆಯಾಗಿದ್ದು, ಕನ್ನಡ ಬಳಕೆ ಅನಿವಾರ್ಯವಾಗಬೇಕೆಂದು ತೀರ್ಮಾನಿಸಿ ಈ ಕೆಲಸ ಮಾಡಿದೆ. ಯಾರೇ ನನ್ನೊಂದಿಗೆ ಆಂಗ್ಲ ಭಾಷೆಯಲ್ಲಿ ಮಾತನಾಡಿದರೂ ನಾನು ಕನ್ನಡದಲ್ಲಿಯೇ ಮಾತನಾಡಿಸುವುದು ಹಾಗೂ ಕನ್ನಡದಲ್ಲಿಯೇ ಸಹಿ ಮಾಡುವುದು ಮತ್ತು ಟಿಪ್ಪಣಿ ಬರೆಯುವುದು. ಹೊರರಾಜ್ಯಗಳಿಗೆ ಪತ್ರ ಬರೆಯುವಾಗ ಮಾತ್ರ ಆಂಗ್ಲ ಭಾಷೆ ಬಳಸಿದರೂ, ಕನ್ನಡ ನಾಡಿನಲ್ಲಿ ಕನ್ನಡವೇ ಸಾರ್ವಭೌಮ ಭಾಷೆ.
ಪ್ರತಿ ಹಳ್ಳಿಯಲ್ಲಿಯೂ ಕನ್ನಡ ಶಾಲೆ ಇರಬೇಕು ಎಂದು ಬರಗೂರು ರಾಮಚಂದ್ರಪ್ಪ ಅವರು ಸಲಹೆ ನೀಡಿದ್ದು, ಗ್ರಾಮಗಳಲ್ಲಿ ಕನ್ನಡ ಶಾಲೆ ಇರಲೇಬೇಕು. ನಾನೂ ಕೂಡ ಕನ್ನಡ ಶಾಲೆ, ಕನ್ನಡ ಮಾಧ್ಯಮದ ಪರವಾಗಿ ಇರುವವನು. ಇತ್ತೀಚೆಗೆ ಆಂಗ್ಲ ಭಾಷೆಯ ವ್ಯಾಮೋಹ ಹೆಚ್ಚುತ್ತಿದೆ. ಇದಕ್ಕೆ ಪೋಷಕರ ಸಹಾಯವೂ ಅಗತ್ಯ. ಪೋಷಕರ ಸಹಾಯವಿಲ್ಲದೆ ಹೋದರೆ ಕನ್ನಡ ಶಾಲೆಗಳು ಉಳಿದು, ಬೆಳೆಯುವುದು ಕಷ್ಟ. ಇದನ್ನೂ ಓದಿ: ಮೈಸೂರು: ಕ್ಷಣಮಾತ್ರದಲ್ಲೇ ಕೆಜಿಗಟ್ಟಲೆ ಚಿನ್ನ ಎಸ್ಕೇಪ್
ಬರಗೂರು ರಾಮಚಂದ್ರಪ್ಪ ಅವರು ಹೇಳಿದಂತೆ ಕನ್ನಡ ಶಾಲೆಗಳ ಬಗ್ಗೆ ಕೂಡಲೇ ಒಂದು ಸಭೆ ಕರೆದು, ಅಲ್ಲಿನ ತೀರ್ಮಾನವನ್ನು ಜಾರಿಗೊಳಿಸಲಾಗುವುದು. ವೈಯಕ್ತಿಕವಾಗಿ ನಾನು ದ್ವಿಭಾಷಾ ನೀತಿಯ ಪರವಾಗಿದ್ದು, ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ.
ಕನ್ನಡ ಚಳವಳಿಗಾರರ ಮೇಲಿರುವ ಪ್ರಕರಣಗಳನ್ನು ಹಿಂಪಡೆಯುವ ಬಗ್ಗೆ ಉಪಸಮಿತಿಯನ್ನು ರಚಿಸಲಾಗಿದ್ದು, ಗೃಹ ಸಚಿವರು ಅಧ್ಯಕ್ಷರಾಗಿದ್ದಾರೆ. ಅವರೊಂದಿಗೆ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದರು.
