ಹುಬ್ಬಳ್ಳಿ: ಇತ್ತೀಚಿನ ದಿನಗಳಲ್ಲಿ ಪ್ರೀತಿ-ಪ್ರೇಮದ ಬಂಧನದಲ್ಲಿ ಅನ್ಯ ಜಾತಿಗಳ ನಡುವೆ ಹೆಚ್ಚಾಗಿ ಮದುವೆಯಾಗುತ್ತಿದ್ದು, ಕೀಳು ಜಾತಿ ಎಂಬ ಕಾರಣಕ್ಕೆ ಮೇಲ್ಜಾತಿಯವರು ಕೀಳು ಜಾತಿಯವರ ಮೇಲೆ ದಬ್ಬಾಳಿಕೆ, ಕೊಲೆ ಮಾಡುವುದು ಹೆಚ್ಚಾಗಿ ಕಂಡು ಬರುತ್ತಿದೆ. ಅದಕ್ಕೆ ದೊಡ್ಡ ಉದಾಹರಣೆ ಎಂಬಂತೆ ಇದೀಗ ಧಾರವಾಡ ಜಿಲ್ಲೆಯಲ್ಲಿ ಬೆಚ್ಚಿ ಬೆಳಿಸುವಂತೆ ದಲಿತ ಯುವಕನ ಮದುವೆಯಾಗಿದ್ದ ಮೇಲ್ಜಾತಿಯ ಇವತ್ತಿಯನ್ನ ತಂದೆಗೆ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಹೌದು, ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಮರ್ಯಾದಾ ಹತ್ಯೆ ಇಡೀ ಧಾರವಾಡ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ. ದಲಿತ ಯುವಕನನ್ನು ಮದುವೆಯಾಗಿದ್ದಕ್ಕೆ 7 ತಿಂಗಳ ಗರ್ಭಿಣಿಯಾಗಿದ್ದ ಮಗಳನ್ನು ತಂದೆಯೇ ಕೊಲೆ ಮಾಡಿದ ಘಟನೆ ನಡೆದಿದೆ.
ಇನಾಂವೀರಾಪುರ ಗ್ರಾಮದ ಮಾನ್ಯಾ (19) ಹತ್ಯೆಯಾದ ಯುವತಿ. ಈಕೆ ಅದೇ ಗ್ರಾಮದ ವಿವೇಕಾನಂದ ಎಂಬವನನ್ನು ಪ್ರೀತಿಸಿ ಮದುವೆಯಾಗಿದ್ದಳು. ಯುವಕ ಅನ್ಯಜಾತಿಯವನು ಎಂಬ ಕಾರಣಕ್ಕೆ ಆಕೆಯ ತಂದೆ ಪ್ರಕಾಶಗೌಡ ಮನೆಗೆ ನುಗ್ಗಿ, ಗರ್ಭಿಣಿ ಎಂಬುದನ್ನೂ ನೋಡದೇ ಪೈಪ್ ಮತ್ತು ಗುದ್ದಲಿಯಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾನೆ. ಘಟನೆಯಲ್ಲಿ ಮತ್ತಿಬ್ಬರಿಗೂ ಗಂಭೀರ ಗಾಯಗಳಾಗಿವೆ. ಇದನ್ನೂ ಓದಿ: ಐಫೋನ್ ಕಂಪನಿಯಲ್ಲಿ 30 ಸಾವಿರ ಉದ್ಯೋಗಿಗಳ ನೇಮಕ!
ಮಾನ್ಯಾ ಮತ್ತು ವಿವೇಕಾನಂದ ಇಬ್ಬರೂ ಓದುತ್ತಿದ್ದಾಗ ಇನ್ಸ್ಟಾಗ್ರಾಂ ಮೆಸೆಜ್ನಿಂದ ಪ್ರೀತಿ ಹುಟ್ಟಿತ್ತು. ಈ ವಿಚಾರ ಎರಡೂ ಕುಟುಂಬಕ್ಕೂ ತಿಳಿದಿತ್ತು. ಇಬ್ಬರ ಪ್ರೀತಿಗೆ ಯುವತಿಯ ಕುಟುಂಬಸ್ಥರು ವಿರೋಧಿಸಿದ್ದರು. ಯುವತಿ ಯಾವುದೇ ಕಾರಣಕ್ಕೂ ವಿವೇಕಾನಂದನನ್ನು ಬಿಟ್ಟು ಬದುಕೋದಿಲ್ಲ ಅಂತ ಹಠ ಹಿಡಿದಿದ್ದಳಂತೆ. ಹೀಗಾಗಿ ವಿವೇಕಾನಂದ ಮಾನ್ಯಾಳ ಜೊತೆ ಕಳೆದ ಜೂ.19 ರಂದು ರಿಜಿಸ್ಟರ್ ಮದುವೆಯಾಗಿದ್ದ. ಈ ಸಮಯದಲ್ಲಿ ಪೊಲೀಸರು 2 ಕುಟುಂಬ ಕರೆದು ರಾಜಿ ಪಂಚಾಯತಿ ಮಾಡಿದ್ದರಂತೆ.
ಈ ನಡುವೆ ಮಾನ್ಯಾ ಗರ್ಭಿಣಿಯಾಗಿದ್ದು, ಮಾನ್ಯ ಹೆತ್ತವರು ಇಬ್ಬರನ್ನು ಕೊಲೆ ಮಾಡಲು ಮುಂದಾಗಿದ್ದರಂತೆ. ಹೀಗಾಗಿ ಮಾನ್ಯ ಮತ್ತು ವಿವೇಕಾನಂದ ಡಿ. 8 ರಂದು ಸ್ವ ಗ್ರಾಮಕ್ಕೆ ಹಿಂತಿರುಗಿದ್ದರು. ಈ ಸಮಯದಲ್ಲಿ ಕೂಡಾ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು 2 ಕಡೆಯವರನ್ನು ಕರೆಸಿ, ರಾಜಿ ಮಾಡಿಸಿದ್ದರಂತೆ. ಆದರೆ ಡಿ.21ರ ಸಂಜೆ ಮತ್ತೆ ವಿವೇಕಾನಂದ ಮನೆ ಮೇಲೆ ದಾಳಿ ಮಾಡಿದ ಪ್ರಕಾಶಗೌಡ ಪಾಟೀಲ್ ಮತ್ತು ಸಂಬಂಧಿಗಳು ಮಾನ್ಯಾ ಮತ್ತು ಮನೆಯಲ್ಲಿದ್ದ ಆಕೆಯ ಅತ್ತೆ ಸೇರಿದಂತೆ ಮೂವರ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಮಾನ್ಯಾಳನ್ನು ಹುಬ್ಬಳ್ಳಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.
ಮಾನ್ಯಾಳ ಕೊಲೆಗೆ ಸಂಬಂಧಿಸಿದಂತೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪ್ರಕಾಶಗೌಡ ಪಾಟೀಲ್ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಧಾರವಾಡ ಎಸ್ಪಿ ಗುಂಜನ್ ಆರ್ಯ, ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
