ಅಮರಾವತಿ: ಸೌತ್ ಇಂಡಿಯಾ ಮೀಡಿಯಾ ಅಸೋಸಿಯೇಷನ್ (SIಒಂ) ವತಿಯಿಂದ ಡಿಸೆಂಬರ್ ೬ ರಂದು ಮಾಲ್ ಆಫ್ ಏಷ್ಯಾ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ದಕ್ಷಿಣ ಭಾರತ ಮಾಧ್ಯಮ ಸಮ್ಮೇಳನಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಲು ಆಂಧ್ರಪ್ರದೇಶ ಹಿರಿಯ ಪತ್ರಕರ್ತರು ಹಾಗೂ ಆಂಧ್ರಪ್ರದೇಶ ವೈಎಸ್‌ಆರ್‌ಸಿಪಿ ರಾಜ್ಯ ಸಮನ್ವಯಕರ್ತರಾದ ಸಜ್ಜಲ ರಾಮಕೃಷರೆಡ್ಡಿರವರನ್ನು ಮಂಗಳವಾರ ಆಹ್ವಾನಿಸಲಾಯಿತು.
ಸೈಮಾ ಪ್ರಧಾನ ಕಾರ್ಯದರ್ಶಿ ಎನ್‌ಕೆ ಸ್ವಾಮಿ, ಬೆಂಗಳೂರು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ ಆಂಧ್ರಪ್ರದೇಶ ಸೈಮಾ ಅಧ್ಯಕ್ಷರಾದ ರಾಜೇಂದ್ರ ಪ್ರಸಾದ್, ಹಿರಿಯ ಪತ್ರಕರ್ತರಾದ ಎಸ್‌ಎಸ್ ಗುರುನಾಥ್ ಎಂಎಸ್‌ಎಸ್ ಭಾಷ ಮತ್ತು ಸತ್ಯಾನಂದರವರು ಇನ್ನಿತರ ಪತ್ರಕರ್ತರು ಶ್ರೀಯುತರನ್ನು ತಾಡೆಪಲ್ಲಿಯಲ್ಲಿರುವ ಅವರ ನಿವಾಶಕ್ಕೆ ಭೇಟಿ ನೀಡಿ ಸಮ್ಮೇಳನಕ್ಕೆ ಆಹ್ವಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್ ರಾಮಕೃಷ್ಣಾರೆಡ್ಡಿಯವರು, ಇದೇ ಪ್ರಪ್ರಥಮ ಭಾರಿಗೆ ದಕ್ಷಿಣ ಭಾರತದಲ್ಲಿರುವ ಐದು ರಾಜ್ಯಗಳ ಪತ್ರಕರ್ತರನ್ನು ಒಂದುಗೂಡಿಸುವ ವೇದಿಕೆಯನ್ನು ಸೈಮಾ ಕಲ್ಪಿಸುತ್ತಿರುವುದು ಸಂತಸಕರ ವಿಷಯವೆಂದರು. ಯಾವುದೇ ಒಬ್ಬ ಪತ್ರಕರ್ತನಿಗೆ ತೊಂದರೆಯಾದಾಗ, ಅವರ ರಕ್ಷಣೆಗೆ, ಸಹಕಾರಕ್ಕೆ ಬೆನ್ನೆಲುಬಾಗಿ ನಿಲ್ಲುವ ಸಂಘಟನೆ ಈ ಸಮಾಜಕ್ಕೆ ಅತ್ಯಗತ್ಯವೆಂದರು. ಮುಂದಿನ ದಿನಗಳಲ್ಲಿ ಸಂಸ್ಥೆ ಉತ್ತಮ ಕರ‍್ಯಗಳನ್ನು ಮಾಡುತ್ತಾ ಮುಂದೆ ಸಾಗಬೇಕೆಂದು ಹಾರೈಸಿದರು.
ಸೌತ್ ಇಂಡಿಯಾ ಮೀಡಿಯಾ ಅಸೋಸಿಯೇಷನ್ (ರಿ) ದಕ್ಷಿಣ ಭಾರತದ ಐದು ರಾಜ್ಯಗಳ ಪತ್ರಕರ್ತರ ಮತ್ತು ಸಹೃದಯರ ಒಕ್ಕೂಟವಾಗಿದೆ. ಇದು ಪ್ರಥಮ ಬಾರಿಗೆ ಐದು ರಾಜ್ಯಗಳ ಪತ್ರಕರ್ತರು ಒಂದುಗೂಡುವ ವೇದಿಕೆಯಾಗಿದ್ದು, ಈ ಮೂಲಕ ಸಾಮೂಹಿಕ ಸಮಸ್ಯೆಗಳ ಪರಿಹಾರಕ್ಕೆ ಒತ್ತು ನೀಡಲು ಉದ್ದೇಶಿಸಲಾಗಿದೆ.
