ಬೆಂಗಳೂರು ದಕ್ಷಿಣ: ಮುಂಬರುವ ಬಜೆಟ್ ನಲ್ಲಿ ಬೇಗೂರಿನಲ್ಲಿರುವ ನಾಗೇಶ್ವರ ದೇವಾಲಯದಲ್ಲಿ ಸುಸಜ್ಜಿತ 20 ಕೋಣೆಗಳನ್ನು ನಿರ್ಮಿಸಲು ಮುಜರಾಯಿ ಇಲಾಖೆ ವತಿಯಿಂದ ಅನುದಾನ ಮೀಸಲಿಡಲಾಗುವುದು ಎಂದು ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಬೇಗೂರು ವಾರ್ಡ್ ನ ಐತಿಹಾಸಿಕ ಹಿನ್ನೆಲೆ ಹೊಂದಿರುವ ನಾಗೇಶ್ವರ ದೇವಾಲಯದಲ್ಲಿ ಆಶ್ರಿತ್ ಗ್ರೂಪ್ ವತಿಯಿಂದ ನಿರ್ಮಿಸಿರುವ ನಾಗೇಶ್ವರ ಸ್ವಾಮಿ ಕಲ್ಯಾಣ ಮಂಟಪ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಮುಖಂಡರುಗಳು ನೆರವಿನಿಂದ ಅಭಿವೃದ್ಧಿಯಾಗಿರುವ ನಾಗನಾಥೇಶ್ವರ ದೇವಾಲಯದಲ್ಲಿ ನಿರ್ಮಿಸಿರುವ ಕಲ್ಯಾಣ ಮಂಟಪದಿಂದ ಎಲ್ಲಾ ಸಮುದಾಯದ ಬಡವರಿಗೆ ಉಪಯೋಗವಾಗಲಿದೆ ಎಂದರು.
ಶಾಸಕ ಎಂ.ಕೃಷ್ಣಪ್ಪ ಮಾತನಾಡಿ, ಸುಮಾರು 1 ಸಾವಿರ ಆಸನ ಸಾಮರ್ಥ್ಯದ ಸುಸಜ್ಜಿತ ಕಲ್ಯಾಣ ಮಂಟಪ ನಿರ್ಮಾಣಗೊಂಡಿದೆ. ಪಕ್ಕದಲ್ಲಿ ಅನ್ನಪೂರ್ಣೇಶ್ವರಿ ಊಟದ ಹಾಲ್ ಇದೆ. ದೇವಸ್ಥಾನದ ಅಭಿವೃದ್ಧಿಯ ಜೊತೆಗೆ ಸುಂದರ ಕೆರೆಯ ನೋಟ, ದ್ವಿಪಥ ರಸ್ತೆ ದೇವಸ್ಥಾನದ ಮೆರುಗು ಹೆಚ್ಚಿಸಿದೆ.ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಶಾಸಕ ಸತೀಶ್ ರೆಡ್ಡಿ ಮಾತನಾಡಿ, ದೇವಸ್ಥಾನದ ಆವರಣದಲ್ಲಿ ಕಲ್ಯಾಣ ಮಂಟಪ ನಿರ್ಮಾಣ ಮಾಡಬೇಕೆಂದು ಗ್ರಾಮಸ್ಥರು ಮತ್ತು ಭಕ್ತಾದಿಗಳ ಬಹುದಿನಗಳ ಬೇಡಿಕೆ ಹೊಂಗಸಂದ್ರದ ಶ್ರೀನಿವಾಸ್ ರೆಡ್ಡಿ ಮತ್ತು ಕುಟುಂಬ ನೆರವೇರಿಸಿದ್ದಾರೆ. ದೇವರು ಅವರ ಕುಟುಂಬಕ್ಕೆ ಸಕಲ ಸನ್ಮಂಗಳ ಉಂಟು ಮಾಡಲಿ ಎಂದು ಪ್ರಾರ್ಥಿಸಿದರು. ಇದನ್ನೂ ಓದಿ: ಜನಸೇವೆಗಾಗಿ ಉಚಿತ ಸೌಲಭ್ಯ
ಈ ಸಂದರ್ಭದಲ್ಲಿ ಆಶ್ರಿತ್ ಗ್ರೂಪ್ ಮಾಲೀಕ ಪವಿತ್ರ ಶ್ರೀನಿವಾಸ್ ರೆಡ್ಡಿ , ದೇವಸ್ಥಾನ ಆಡಳಿತ ಮಂಡಳಿ ಕಮಿಟಿ ಅಧ್ಯಕ್ಷ ಹುಲ್ಲಹಳ್ಳಿ ಶ್ರೀನಿವಾಸ್, ಪಾಲಿಕೆ ಮಾಜಿ ಸದಸ್ಯ ಆಂಜಿನಪ್ಪ, ಲೋಕೇಶ್, ಹರೀಶ್ ಪ್ರಶಾಂತ್, ಸಂಪತ್,ರಮೇಶ್ ಆರಾಧ್ಯ, , ನವೀನ್ ಗೌಡ,ಮಧುಸೂದನ್ ರೆಡ್ಡಿ , ಅನ್ನ ಪೂರ್ಣೇಶ್ವರಿ ಟ್ರಸ್ಟ್ ದೇವಸ್ಥಾನ ಕಮಿಟಿ ಸದ್ಯಸರು ಹಾಗೂ ಬೇಗೂರಿನ ನಿವಾಸಿಗಳು ಉಪಸ್ಥಿತರಿದ್ಥರು.
