ಬೆಂಗಳೂರು: ಮೂತ್ರಪಿಂಡ ಮತ್ತು ಮೂತ್ರಾಂಗ ಸಂಬಂಧಿತ ರೋಗಗಳ ಚಿಕಿತ್ಸೆಯಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರಿನ ನೆಫ್ರೋ ಯೂರೋಲಜಿ ಸಂಸ್ಥೆಯು ಪ್ರತಿಷ್ಠಿತ ರಾಷ್ಟ್ರೀಯ ಹಾಸ್ಪಿಟಲ್ ಅಕ್ರೆಡಿಟೇಶನ್ ಮಂಡಳಿ (NABH) ಮಾನ್ಯತೆ ಪತ್ರವನ್ನು ಪಡೆದುಕೊಂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ರಾಜ್ಯ ಸರ್ಕಾರದ ಸ್ವಾಯತ್ತ ಸಂಸ್ಥೆಯಾಗಿರುವ ನೆಫ್ರೋ-ಯುರಾಲಜಿ ಸಂಸ್ಥೆ 160 ಹಾಸಿಗೆ ಸಾಮರ್ಥ್ಯದೊಂದಿಗೆ 2007ರಲ್ಲಿ ಬೆಂಗಳೂರಿನಲ್ಲಿ ಆರಂಭವಾಗಿದ್ದು, ಮೈಸೂರಿನ ಕೆ.ಆರ್.ಆಸ್ಪತ್ರೆಯ ಆವರಣದಲ್ಲಿ ಸಂಸ್ಥೆಯ ಘಟಕವನ್ನು ಸ್ಥಾಪಿಸಿ ಸೇವೆಯನ್ನು ನೀಡುತ್ತಿದೆ. ಇದನ್ನೂ ಓದಿ: ಹುಲಿ ದಾಳಿಗೆ ತುತ್ತಾದ ಮಹದೇವಗೌಡರ ಚಿಕಿತ್ಸಾ ವೆಚ್ಚ ಸರ್ಕಾರ ಭರಿಸಲಿದೆ: ಸಿಎಂ
ಈ ಸಂಸ್ಥೆ ದೇಶದ ಅಗ್ರ 10 ವಿಶೇಷ ಆಸ್ಪತ್ರೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಇದೀಗ ಸಂಸ್ಥೆಯು ಸುರಕ್ಷತೆ ಮತ್ತು ಅತ್ಯುತ್ತಮ ವೈದ್ಯಕೀಯ ಗುಣಮಟ್ಟಕ್ಕೆ ಎನ್ಎಬಿಎಚ್ ನೀಡುವ ಪ್ರಮಾಣ ಪತ್ರ ಪಡೆದುಕೊಂಡಿರುವುದು ಸಂಸ್ಥೆಯ ಗುಣಮಟ್ಟದ ಸೇವೆಗೆ ದೊರೆತಿರುವ ರಾಷ್ಟ್ರೀಯ ಮಾನ್ಯತೆಯಾಗಿದೆ.
ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಸ್ಥೆಗೆ ದೊರೆತಿರುವ ಪ್ರಮಾಣಪತ್ರವನ್ನು ತಮ್ಮ ಗೃಹ ಕಚೇರಿಯಲ್ಲಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ನೆಫ್ರೋ ಯೂರೋಲಜಿ ಸಂಸ್ಥೆಯ ನಿರ್ದೇಶಕ ಆರ್.ಎಂ. ಶಿವಲಿಂಗಯ್ಯ, ಸ್ಥಾಪಕ ನಿರ್ದೇಶಕ ಡಾ. ಜಿ.ಕೆ. ವೆಂಕಟೇಶ್ ಮತ್ತಿತರ ಗಣ್ಯರು ಹಾಜರಿದ್ದರು.
