ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿರುವ ರಾಜಕೀಯ ವ್ಯಕ್ತಿಗಳಿಗೆ ಬಾಂಬ್ ಬೆದರಿಕೆಯ ಕರೆಗಳು ಇತ್ತೀಚಿಗೆ ಹೆಚ್ಚಾಗುತ್ತಿದ್ದು, ಅದರಂತೆ ಇದೀಗ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಮನೆಗೆ ಬಾಂಬ್ ಬೆದರಿಕೆ ಕರೆ ಬಂದಿದೆ ಎಂದು ತಿಳಿದುಬಂದಿದೆ.
ಹೌದು, ಸಿಎಂ ಹಾಗೂ ಡಿಸಿಎಂ ಮನೆಗೆ ಹುಸಿ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ತಮಿಳುನಾಡಿನ ವ್ಯಕ್ತಿಯೋರ್ವನಿಂದ ಬೆದರಿಕೆ ಸಂದೇಶ ಕಳುಹಿಸಿರುವ ಅನುಮಾನಗಳು ವ್ಯಕ್ತವಾಗಿದ್ದು, ಆತನ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಆರ್ನಾ ಅಶ್ವಿನ್ ಶೇಖರ್ (aarna.ashwinshekher@outlook.com) ಎಂಬಾತನ ಐಡಿಯಿಂದ ಡಿಸಿಎಂ ಡಿಕೆ ಶಿವಕುಮಾರ್ ಇ-ಮೇಲ್ ಐಡಿಗೆ ಬಾಂಬ್ ಬೆದರಿಕೆ ಸಂದೇಶ ಕಳುಹಿಸಲಾಗಿದೆ. ಇದನ್ನೂ ಓದಿ: ಬೆದರಿಕೆಗೆ ನಾನೂ ಹೆದರಲ್ಲ: ಖರ್ಗೆಯವರೂ ಹೆದರುವುದಿಲ್ಲ: ಸಿಎಂ
6 ಆರ್ಡಿಎಕ್ಸ್ ಬಾಂಬ್ಗಳು ಇಬ್ಬರ ಮನೆಯಲ್ಲೂ ಫಿಕ್ಸ್ ಆಗಿದೆ. ರಿಮೋಟ್ ಮೂಲಕ ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ. ಹುಸಿ ಬಾಂಬ್ ಬೆದರಿಕೆ ಸಂದೇಶ ಬಂದ ಬೆನ್ನಲ್ಲೇ ಬಾಂಬ್ ಸ್ಕ್ವಾಡ್ ತಕ್ಷಣ ನಿವಾಸಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಇನ್ನು ಹುಸಿಬಾಂಬ್ ಕರೆ ಬಂದ ಹಿನ್ನೆಲೆ ಅಶ್ವತ್ಥ್ ನಾರಾಯಣಸ್ವಾಮಿ ಎಂಬುವವರ ದೂರು ಆಧರಿಸಿ ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
