ಬೆಂಗಳೂರು: ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ನಿಕಟಪೂರ್ವ ಬಿಬಿಎಂಪಿ ಸದಸ್ಯರು ಕಾಂಗ್ರೆಸ್ ಮುಖಂಡರಾದ ಶೋಭಾ ಜಗದೀಶ್ ಗೌಡ ಮತ್ತು ಜಗದೀಶ್ ಗೌಡರು ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ವಿರೋಧ ಪಕ್ಷದ ನಾಯಕರ ಆರ್ ಅಶೋಕ್, ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವಂತ ಎಂ ಸತೀಶ್ ರೆಡ್ಡಿ ಅವರ ನೇತೃತ್ವದಲ್ಲಿ ಭಾನುವಾರ (ಅ. 12) ಅದ್ದೂರಿಯಾಗಿ ನೆರವೇರಿದ ಕಾರ್ಯಕ್ರಮದಲ್ಲಿ ಪಕ್ಷ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರಾಗಿರುವಂತ ಅಶೋಕ್ ಅವರು ಮಾತನಾಡಿ, ಸರ್ಕಾರದ ಮೇಲೆ ಸಾರ್ವಜನಿಕರು ಅಲ್ಲದೆ ಪಕ್ಷದ ಮುಖಂಡರು ಸಹ ಬೇಸತ್ತು ಬಿಜೆಪಿ ಪಕ್ಷವನ್ನು ಸೇರ್ಪಡೆಗೊಳ್ಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ದುರಾಡಳಿತ, ಭ್ರಷ್ಟಾಚಾರ ಅತಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಜನರು ಕಂಗಾಲಾಗುತ್ತಿದ್ದಾರೆ ಎಂದರು.
ಇನ್ನು ಸಂಸದ ತೇಜಸ್ವಿ ಸೂರ್ಯ ಅವರು ಮಾತನಾಡಿ, ಬಿಜೆಪಿಯ ಅಂದರೆ ಬೊಮ್ಮನಹಳ್ಳಿ, ಬೊಮ್ಮನಹಳ್ಳಿ ಎಂದರೆ ಬಿಜೆಪಿ ಎಂದು ಘೋಷಿಸಿದರು. ಜಿಬಿಎ ಚುನಾವಣೆಯಲ್ಲಿ ಇನ್ಮುಂದೆ ಪ್ರತಿಯೊಂದು ವಾರ್ಡ್ಗಳಲ್ಲಿ ಬಿಜೆಪಿ ಜಯಭೇರಿ ಬಾರಿಸುವುದು ಖಚಿತ ಎಂದರು.
ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿರುವ ಶಾಸಕ ಸತೀಶ್ ರೆಡ್ಡಿ ಅವರು, ಬ್ರಾಂಡ್ ಬೆಂಗಳೂರಲ್ಲ ಇದು ರಸ್ತೆ ಗುಂಡಿ ಬೆಂಗಳೂರು ಎಂದು ಟೀಕಿಸಿದರು. ಇದನ್ನೂ ಓದಿ: ಲಾಲ್ಬಾಗ್ ರಕ್ಷಣೆಗೆ ನಾವು ಬದ್ಧ: ಡಿಕೆಶಿ
ಪಕ್ಷ ಸೇರ್ಪಡೆಗೊಂಡಿರುವ ಶೋಭಾ ಜಗದೀಶ್ ಗೌಡ ಹಾಗೂ ಜಗದೀಶ್ ಗೌಡ ರವರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ದೇಶ ಅಭಿವೃದ್ಧಿ ಮಾಡುತ್ತಿರುವುದನ್ನು ನೋಡಿ ಆಕರ್ಷಿಕನಾಗಿ ಕಾಂಗ್ರೆಸ್ ಪಕ್ಷ ತೊರೆದು ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಗೊಂಡಿರುವುದು ಸಂತಸ ತಂದಿದೆ ಎಂದರು.
ಈ ಕಾರ್ಯಕ್ರಮದಲ್ಲಿ ನಿಕಟ ಪೂರ್ವ ಬಿಬಿಎಂಪಿ ಸದಸ್ಯರುಗಳಾದ ಮಂಜುನಾಥ್ ರೆಡ್ಡಿ, ಶ್ರೀನಿವಾಸ್ ರೆಡ್ಡಿ ಸೇರಿದಂತೆ ಹಲವಾರು ಬಿಜೆಪಿ ಮುಖಂಡರು ಭಾಗಿಯಾಗಿದ್ದರು.
