ಬೆಂಗಳೂರು: ಪತ್ರಕರ್ತರ ಆರೋಗ್ಯ ದೃಷ್ಟಿಯಿಂದ ಚಿಕಿತ್ಸಾ ವೆಚ್ಚ ಭರಿಸಲು ಜಿಬಿಎ (ಗ್ರೇಟರ್ ಬೆಂಗಳೂರು ಪ್ರಾಧಿಕಾರ) ದಲ್ಲೂ 2 ಕೋಟಿ ರೂ.ಗಳಿಗೂ ಅಧಿಕಾರ ಮೀಸಲಿಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭರವಸೆ ನೀಡಿದ್ದಾರೆ.
ಬಿಬಿಎಂಪಿಯಲ್ಲಿ ಪತ್ರಕರ್ತರು ಸಾಮೂಹಿಕವಾಗಿ ಸಲ್ಲಿಸಿದ ಮನವಿಗೆ ಸ್ಪಂದಿಸಿದ ಶಿವಕುಮಾರ್ ಅವರು, ಪತ್ರಕರ್ತರ ಚಿಕಿತ್ಸಾ ವೆಚ್ಚದ ಹಣವನ್ನು 5 ಪಾಲಿಕೆಗಳಲ್ಲಿ ಪ್ರತ್ಯೇಕವಾಗಿ ನೀಡುವ ಬದಲು ಜಿಬಿಎ ಮೂಲಕವೇ ನೀಡುವುದು ಸೂಕ್ತ ಎಂದರು.
ಈ ಹಿಂದೆ ಬಿಬಿಎಂಪಿ ಬಜೆಟ್ ನಲ್ಲಿ ನಿಗದಿ ಮಾಡುತ್ತಿದ್ದಂತೆ ಈಗ ಎಲ್ಲಾ 5 ನಗರ ಪಾಲಿಕೆಗಳಲ್ಲೂ ಪ್ರತ್ಯೇಕವಾಗಿ ಬಜೆಟ್ ನಲ್ಲಿ ಹಣ ನಿಗದಿ ಮಾಡಿದರೆ ಅದು ದುರ್ಬಳಕೆ ಆಗುವ ಸಾಧ್ಯತೆ ಇದೆ. ಆದ್ದರಿಂದ ಪತ್ರಕರ್ತರ ಚಿಕಿತ್ಸೆ ವೆಚ್ಚಕ್ಕೆ ಬಳಕೆಯಾಗಬೇಕೆಂದರೆ ಏಕ ಮಾರ್ಗದ ಮೂಲಕ ನೀಡುವಂತಾಗಬೇಕು ಎಂದು ಹೇಳಿದರು.
ಜಿಬಿಎ ಅನುದಾನದಲ್ಲೇ ಪತ್ರಕರ್ತರಿಗೆ ಹೆಚ್ಚು ಹಣ ನಿಗದಿ ಮಾಡಿ, ಅದರ ಮೂಲಕವೇ ನಿಯಮದ ಪ್ರಕಾರ ಹಂಚಿಕೆ ಮಾಡಲಾಗುವುದು ಎಂದು ಶಿವಕುಮಾರ್ ವಿವರಿಸಿದ್ದರು.
ಈ ಸಂದರ್ಭದಲ್ಲಿ ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ, ಪತ್ರಕರ್ತರಾದ ಚಂದ್ರಶೇಖರ್, ಎನ್ ಕೆ ಸ್ವಾಮಿ, ಗಣೇಶ್ , ವೆಂಕಟೇಶ್ ಪೈ, ಯಾಖೂಬ್, ಎಂ ಎಸ್ ಸಿ ಆರಾಧ್ಯ ಹಾಜರಿದ್ದರು.
