ಗುಡಿಬಂಡೆ: ಬಡ-ಮಧ್ಯಮ ವರ್ಗದ ಜನರಿಗೆ ಕೈಗೆಟುಕುವ ದರದಲ್ಲಿ ಜೆನೆರಿಕ್ ಔಷಧಿ ನೀಡುತ್ತಿದ್ದ ಪ್ರಧಾನಮಂತ್ರಿ ಜನೌಷಧಿ ಕೇಂದ್ರ ಇಂದು ಶಾಶ್ವತವಾಗಿ ಮುಚ್ಚಲ್ಪಟ್ಟಿದೆ. ರಾಜ್ಯ ಸರ್ಕಾರದ ಆದೇಶದಿಂದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿದ್ದ ಜನೌಷಧಿ ಕೇಂದ್ರ ಮುಚ್ಚಿದ್ದು, ಈಗ ಜನರು ಖಾಸಗಿ ಅಂಗಡಿಗಳಲ್ಲಿ ಅಧಿಕ ಮೊತ್ತ ನೀಡಿ ಔಷಧಿ ಖರೀದಿಸಬೇಕಾದ ಪರಿಸ್ಥಿತಿ ಬಂದಿದೆ.
ಕರ್ನಾಟಕ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ HP ರಾಮನಾಥ್ ರವರು ಮಾತನಾಡಿ, ಗುಡಿಬಂಡೆ ತಾಲೂಕಿನಲ್ಲಿ ಬಹುತೇಕ ತಾಲೂಕು ಮಟ್ಟದ ಅಧಿಕಾರಿಗಳು ಗುಡಿಬಂಡೆ ಪಟ್ಟಣದಲ್ಲಿ ವಾಸವಿಲ್ಲದೆ ಇರುವುದರಿಂದ, ಸ್ಥಳೀಯ ಸಮಸ್ಯೆಗಳ ಪರಿಹಾರದಲ್ಲಿ ವಿಳಂಬ ಉಂಟಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ. ಹಿಂದಿನ ದಿನಗಳಲ್ಲಿ ವೈದ್ಯರಿದ್ದ ಕಾರಣ ಚಿಕಿತ್ಸಾ ಸೇವೆಗಳು ಸರಾಗವಾಗಿ ನಡೆಯುತ್ತಿದ್ದವು. ಈಗ ವೈದ್ಯರಿಲ್ಲದ ಸ್ಥಿತಿಯಿಂದ ಹಾಗೂ ಸ್ಕ್ಯಾನಿಂಗ್ ಸಿಬ್ಬಂದಿ ಕೊರತೆ, ಸ್ವಚ್ಛತೆಯ ಅಭಾವದಿಂದ ಜನತೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಗಡಿಭಾಗದಲ್ಲಿ ಕಾರ್ಮಿಕರು ಮತ್ತು ರೈತರ ಸಂಖ್ಯೆ ಹೆಚ್ಚು ಇರುವುದರಿಂದ ತಕ್ಷಣವೇ ಅಗತ್ಯ ವೈದ್ಯರು ಮತ್ತು ಸಿಬ್ಬಂದಿಯನ್ನು ನಿಯೋಜಿಸಲು ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮನವಿ ತಿಳಿಸಿದ್ದಾರೆ. ಇದನ್ನೂ ಓದಿ: ರಾಜಕೀಯದಲ್ಲಿ ಹುಷಾರಾಗಿ ಇರಬೇಕು: ಸತೀಶ್ ಜಾರಕಿಹೊಳಿ
ಆಡಳಿತ ವೈದ್ಯಾಧಿಕಾರಿ ಪ್ರದೀಪ್ ರವರು ಮಾತನಾಡಿ, ಕಳೆದ ತಿಂಗಳು ಕಾರಣಾಂತರಗಳಿಂದ ಗುಡಿಬಂಡೆ ತಾಲೂಕಿನ ಮೂಳೆಯ ವೈದ್ಯರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದು, ಪ್ರಸ್ತುತ ಈ ಹುದ್ದೆ ಖಾಲಿಯಾಗಿದೆ. ಈ ಕುರಿತು ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಶೀಘ್ರದಲ್ಲೇ ಹೊಸ ವೈದ್ಯರನ್ನು ನಿಯೋಜಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.
