ಬೆಂಗಳೂರು: ರೇಬೀಸ್ ರೋಗ ನಿತಂತ್ರಣ ಮಾಡುವ ಉದ್ದೇಶದಿಂದ ಬಿಬಿಎಂಪಿ ಪಾಲಿಕೆ ಎಲ್ಲಾ ವಾರ್ಡ್ ಗಳಲ್ಲಿ ಎಲ್.ಇ.ಡಿ ವಾಹನದ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ಕೆ ಇಂದು ಚಾಲನೆ ನೀಡಲಾಗಿದ್ದು, ನಗರದಾದ್ಯಂತ ವಾಹನ ತೆರಳಿ ನಾಗರಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗುವುದೆಂದು ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾದ ಸುರೋಳ್ಕರ್ ವಿಕಾಸ್ ಕಿಶೋರ್ ರವರು ತಿಳಿಸಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ವಿಶ್ವ ಝೂನೋಸಿಸ್ ದಿನದ ಭಾಗವಾಗಿ ರೇಬೀಸ್ ರೋಗ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವ ಸಂಬಂಧ ಪಾಲಿಕೆ ಕೇಂದ್ರ ಕಛೇರಿ ಆವರಣದಲ್ಲಿ ಇಂದು (ಸೋಮವಾರ ಜುಲೈ 07) ಜಾಗೃತಿ ಮೂಡಿಸುವ ವಾಹನಕ್ಕೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದ ಅವರು, ಪ್ರಾಣಿಗಳಿಂದ ವಿವಿಧ ರೀತಿಯ ರೋಗಗಳು ಮನುಷ್ಯರಿಗೆ ಹರಡುತ್ತವೆ. ಮನುಷ್ಯರು ನಾಯಿಗಳ ಜೊತೆ ಹೆಚ್ಚು ಸಂಪರ್ಕದಲ್ಲಿದ್ದು, ನಾಯಿಗಳು ಕಚ್ಚಿದಾಗ ಹೆಚ್ಚು ಸಮಸ್ಯೆಗಳಾಗುವ ಸಂಭವವಿದೆ. ಆ ಕಾರಣ ಪ್ರಾಣಿಗಳಿಗೆ ನಿರಂತರವಾಗಿ ರೇಬೀಸ್ ಲಸಿಕೆ ಹಾಕಿಸಬೇಕು. ರೇಬೀಸ್ ಕುರಿತು ನಾಗರಿಕರಲ್ಲಿ ಹೆಚ್ಚು ಅರಿವು ಮೂಡಿಸಬೇಕೆಂದು ತಿಳಿಸಿದರು.
ಪ್ರಾಣಿಗಳಿಂದ ಸಮಸ್ಯೆಯಾಗಲಿದೆ ಎಂದು ಯಾರೂ ಅವುಗಳಿಂದ ಅಂತರ ಕಾಯ್ದೊಕೊಳ್ಳಬೇಡಿ. ಸಹಬಾಳ್ವೆಯೊಂದಿಗೆ ಅವುಗಳ ನಡವಳಿಕೆಗಳನ್ನು ಅರ್ಥಮಾಡಿಕೊಂಡು ಜೊತೆ ಇರಬೇಕು. ಪ್ರಾಣಿಗಳಿಂದ ಹರಡುವ ರೋಗಗಳ ಕುರಿತು ಇತರೆ ಐಇಸಿ ಚಟುವಟಿಕೆಗಳನ್ನು ಕೂಡಾ ಅನಾವರಣ ಮಾಡಲಾಗುವುದೆಂದು ತಿಳಿಸಿದರು.
ಶಾಲಾ-ಕಾಲೇಜುಗಳಲ್ಲಿ ಜಾಗೃತಿ
ಪಾಲಿಕೆಯ ಎಲ್ಲಾ ವಾರ್ಡ್ಗಳಿಗೆ ವಾಹನ ಸಂಚರಿಸುವುದರ ಜೊತೆಗೆ ಪಾಲಿಕೆ, ಸರ್ಕಾರಿ ಹಾಗೂ ಖಾಸಗಿ ಶಾಲಾ-ಕಾಲೇಜುಗಳಿಗೆ ತೆರಳಿ, ರೇಬೀಸ್ ರೋಗ ನಿಯಂತ್ರಣದ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು. ಇದನ್ನೂ ಓದಿ: ಹಾರ್ಟ್ ಅಟ್ಯಾಕ್ ಗೆ ಕಾರಣ ತಿಳಿಸಿದ ಆರೋಗ್ಯ ಸಚಿವರು
ವಿಶ್ವ ಝೂನೋಸಿಸ್ ದಿನದ ಕುರಿತು
ಝೂನೋಸಸ್ ಎಂದರೆ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ರೋಗಗಳು. ಪ್ರಾಣಿಗಳಲ್ಲಿರುವ ವೈರಸ್, ಬ್ಯಾಕ್ಟೀರಿಯಾ ಮತ್ತು ಇತರೆ ಸೂಕ್ಷ್ಮಾಣುಗಳಿಂದ ನೇರ ಸಂಪರ್ಕ, ಗಾಳಿ, ನೀರು, ಆಹಾರ, ಪ್ರಾಣಿಗಳ ಜೊಲ್ಲು ಮೂಲಕ ಮನುಷ್ಯರಿಗೆ ಸೋಂಕು ತಗಲುತ್ತವೆ.
ಮನುಷ್ಯರಿಗೆ ಗೊತ್ತಿರುವ ಶೇ. 60ಕ್ಕೂ ಹೆಚ್ಚು ರೋಗಗಳ ಪ್ರಾಣಿಜನ್ಯವಾಗಿವೆ. ಈ ದಿನವು ಮನುಷ್ಯರು ಮತ್ತು ಪ್ರಾಣಿಗಳ ರೋಗಗಳು ಮತ್ತು ಅವುಗಳ ಆರೋಗ್ಯದ ಅಂತರ್-ಸಂಬಂಧದ ಪ್ರಾಮುಖ್ಯತೆಯನ್ನು ಸೂಚಿಸುತ್ತದೆ. ಈ ದಿನವು ಏಕೀಕೃತ ಆರೋಗ್ಯದ ಮೂಲಕ ಪ್ರಾಣಿಜನ್ಯ ರೋಗಗಳ ನಿಯಂತ್ರಣದ ಮಹತ್ವವನ್ನು ಎತ್ತಿ ಹಿಡಿಯುತ್ತದೆ.
ರೇಬೀಸ್ ರೋಗದ ಕುರಿತು
ರೇಬೀಸ್ ರೋಗವು ಒಂದು ವೈರಾಣುವಿನಿಂದ ಹರಡುವ ಝೂನೋಟಿಕ್ ರೋಗವಾಗಿದ್ದು, ಲಸಿಕಾಕರಣದಿಂದ ಸಂಪೂರ್ಣವಾಗಿ ನಿಯಂತ್ರಿಸಬಹುದಾಗಿದೆ. ರೇಬೀಸ್ ರೋಗವು ಪ್ರಾಣಿಗಳ ಜೊಲ್ಲಿನಿಂದ ಕಚ್ಚುವುದು, ನೆಕ್ಕುವುದು ಮತ್ತು ತರಚುಗಾಯಗಳಿಂದ ಹರಡುತ್ತದೆ. ರೇಬೀಸ್ ರೋಗದಿಂದ ಪ್ರಪಂಚದಾದ್ಯಂತ ವಾರ್ಷಿಕ ಅಂದಾಜು 59,000 ಕ್ಕೂ ಹೆಚ್ಚು ಮರಣಗಳು ಸಂಭವಿಸುತ್ತಿದ್ದು, ಶೇ. 97ಕ್ಕೂ ಹೆಚ್ಚು ಪ್ರಕರಣಗಳಲ್ಲಿ ನಾಯಿಗಳು ಕಾರಣವಾಗಿವೆ. ರೇಬೀಸ್ ರೋಗಕ್ಕೆ ಪ್ರತೀ 9 ನಿಮಿಷಕ್ಕೆ ಒಂದು ಮರಣ ಸಂಭವಿಸುತ್ತಿದ್ದು, ಅದರಲ್ಲಿ ಶೇ. 40 ರಷ್ಟು 15 ವರ್ಷಕ್ಕಿಂತ ಕೆಳಗಿನ ಮಕ್ಕಳ ಪ್ರಕರಣಗಳಾಗಿವೆ.
