ವಿಜಯಪುರ: ಕರ್ನಾಟಕದ ಗಡಿ ಭಾಗದಲ್ಲಿ ಇರುವ ಸುಕ್ಷೇತ್ರ ಪಂಢರಾಪುರ(ಸೋಲಾಪುರ) ಪಂಢರಪುರದಲ್ಲಿ ಆಷಾಢ ಏಕಾದಶಿ ಪ್ರಯುಕ್ತ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ಗೋವಾ, ತೆಲಂಗಾಣ ರಾಜ್ಯಗಳ ಲಕ್ಷಾಂತರ ಭಕ್ತರು ಬಂದು ವಿಠಲ-ರುಕ್ಮಿಣಿ ದರ್ಶನ ಪಡೆದರು.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ದಂಪತಿ ಬೆಳಿಗ್ಗೆ ದೇವರಿಗೆ ವಿಶೇಷ ಪೂಜೆ, ಕಾಕಡಾರತಿ ಸಲ್ಲಿಸಿದ ಬಳಿಕ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಇದನ್ನೂ ಓದಿ: ಸಂಕನೂರು ಗ್ರಾಮದಲ್ಲಿ ಮೊಹರಂ ಹಬ್ಬದ ಸಡಗರ
ಚಂದ್ರಭಾಗಾ ನದಿಯಲ್ಲಿ ಮಿಂದು ಭಕ್ತರು ನದಿಗೆ ವಿಶೇಷ ಪೂಜೆ ಸಲ್ಲಿಸಿ, ಆರತಿ ತೇಲಿ ಬಿಟ್ಟರು. ‘ವಿಠಲ, ವಿಠಲ’ ಎಂದು ಅಭಂಗಗಳನ್ನು ಹಾಡುತ್ತ ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದರು. ವಿಠಲನಿಗೆ ಬಗೆಬಗೆಯ ಪುಷ್ಪಾಲಂಕಾರ, ವಿಶೇಷ ಪೂಜೆ ನಡೆದವು. ಭಕ್ತರು ಹಾಡುತ್ತ, ಕುಣಿಯುತ್ತ ಭಜನೆ, ನಾಮ ಸಂಕೀರ್ತನಗಳಲ್ಲಿ ಮೈಮರೆತರು. ದಿಂಡಿಯಾತ್ರೆಯಲ್ಲಿ ಬಂದ ವಾರಕಾರಿಗಳು ವಿಠಲನ ನಾಮಸ್ಮರಣೆಯಲ್ಲಿ ಹೆಜ್ಜೆ ಹಾಕಿದರು.
ಪಾದಯಾತ್ರಿ ವಾರಕಾರಿಗಳಿಗೆ ಪಂಢರಪುರದ 4 ದಿಕ್ಕಿನಲ್ಲಿ ಊಟೋಪಹಾರದ ವ್ಯವಸ್ಥೆಯಿತ್ತು. ಕಳೆದ 2 ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಭಕ್ತರ ಸಂಖ್ಯೆ ಹೆಚ್ಚಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಭಕ್ತರಿಗೆ ಯಾವುದೇ ರೀತಿ ತೊಂದರೆ ಆಗದಿರಲಿಯೆಂದು ಜಿಲ್ಲಾಡಳಿತ ಮತ್ತು ದೇವಸ್ಥಾನ ಸಮಿತಿಯು ಸಕಲ ಸಿದ್ಧತೆ ಮಾಡಿದ್ದರು. ಮಹಾಪೂಜೆ ವೇಳೆ ವಿಠಲನ ದರ್ಶನಕ್ಕೆ ಗಂಟೆಗೆ 1,200 ರಿಂದ 1,300 ಭಕ್ತರು ದರ್ಶನ ಪಡೆಯುವ ವ್ಯವಸ್ಥೆ ಕಲ್ಪಿಸಲಾಗಿತ್ತು.
ಸುರಕ್ಷತೆ ದೃಷ್ಟಿಯಿಂದ 300 ಸಿಸಿಟಿವಿ ಕ್ಯಾಮೆರಾ, 65 ಎಕರೆ ಜಾಗದಲ್ಲಿ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ, ಶೌಚಾಲಯ, ಸ್ನಾನಗೃಹ, ಕುಡಿಯುವ ನೀರು, ಆರೋಗ್ಯ, ವೈದ್ಯಕೀಯ ವ್ಯವಸ್ಥೆ, ಮಹಿಳಾ ಭಕ್ತರಿಗೆ ಪ್ರತ್ಯೇಕವಾಗಿ ಸ್ನಾನಗೃಹ, ಶೌಚಾಲಯ ವ್ಯವಸ್ಥೆ ಮಾಡಲಾಗಿತ್ತು.
