ಕೊಪ್ಪಳ: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ರಾಜ್ಯದಲ್ಲೆಡೆ ಮೊಹರಂ ಹಬ್ಬವನ್ನು ಬಹಳ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಇನ್ನು ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕು ಸಂಕನೂರು ಗ್ರಾಮದಲ್ಲಿ ಕೂಡ ಪ್ರತಿ ವರ್ಷದಂತೆ ಈ ವರ್ಷವೂ ಮೊಹರಂ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಸಂಕನೂರು ಗ್ರಾಮದಲ್ಲಿ ಹಿಂದೂ ಮುಸಲ್ಮಾನ್ ಭಾವೈಕ್ಯತೆ ಮೆರೆದು ಈ ಹಬ್ಬವನ್ನು ಆಚರಿಸಲಾಗುತ್ತದೆ.
ಹಿಂದೂ ಮಠದಲ್ಲಿ ದೇವರನ್ನು ಕೂಡಿಸುವುದು
ಬೇರೆ ಕಡೆಗಳಲ್ಲಿ ಕೇವಲ ಮುಸ್ಲಿಂ ಮಸೀದಿಗಳಲ್ಲಿ ದೇವರನ್ನು ಕೂರಿಸಲಾಗುತ್ತದೆ. ಆದರೆ ಸಂಕನೂರು ಗ್ರಾಮದಲ್ಲಿ ಇತಿಹಾಸವನ್ನು ಹೊಂದಿರುವ ಹಿಂದೂ ದೇವಾಲಯವಾದ ಧರ್ಮರ ಮಠದಲ್ಲೂ ಕೂಡ ಮೊಹರಂ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ.
ಧರ್ಮರ ಮಠದಲ್ಲಿ ಸಾಂಪ್ರದಾಯ ಬದ್ಧತೆ ಪ್ರಕಾರ ಮಸೀದಿಗಳಲ್ಲಿ ಹೇಗೆ ದೇವರಗಳನ್ನು ಕೂರಿಸಿ ಅಲಂಕರಿಸುತ್ತಾರೋ ಅದೇ ರೀತಿ ಧರ್ಮರ ಮಠದಲ್ಲೂ ಕೂಡ ಐದು ದೇವರುಗಳನ್ನು ಕೂರಿಸಿ ಹಬ್ಬ ಆಚರಣೆ ಮಾಡಲಾಗುತ್ತದೆ.
ಇನ್ನು ಮೊಹರಂ ಕೊನೆಯ ದಿನದ ಮುಂಚೆಯೇ ರಾತ್ರಿ ಎಲ್ಲ ಊರಿನ ಜನರೆಲ್ಲರೂ ಮಸೀದಿಗಳು ಹಾಗೂ ಧರ್ಮರ ಮಠಕ್ಕೆ ಎಡೆಕೊಡುತ್ತಾರೆ. ಊರ ಜನರೆಲ್ಲರೂ ಕುಣಿಯುತ್ತ ಹಾಡುತ್ತಾ ತಮಟೆಗಳನ್ನು ಬಡಿಯುತ್ತಾ ಎಲ್ಲರೂ ಮೊಹರಂ ಕೊನೆಯ ದಿನದ ಮುಂಚಿನ ಒಂದು ದಿನ ರಾತ್ರಿ ಮಸೀದಿಗಳಿಗೆ ಹಾಗೂ ಧರ್ಮರ ಮಠ ಸೇರಿದಂತೆ ಒಟ್ಟು ನಾಲ್ಕು ಮಸೀದಿ ಹಾಗೂ ಒಂದು ಧರ್ಮರ ಮಠದಲ್ಲಿ ದೇವರು ಕೂರಿಸಿರುವುದರಿಂದ ಎಲ್ಲರೂ ಅಲ್ಲಿಗೆ ಎಡೆ ತೆಗೆದುಕೊಂಡು ಹೋಗುತ್ತಾರೆ.
ಅಲ್ಲದೆ ಮೊಹರಂ ಕೊನೆಯ ದಿನದಂದು ಬೆಳ್ಳಂಬೆಳಗ್ಗೆ 4 ಮಸೀದಿ ಹಾಗೂ ಒಂದು ಧರ್ಮರ ಮಠದ ದೇವರುಗಳೆಲ್ಲವೂ ಬೆಳಗ್ಗೆ 6:00 ಸುಮಾರಿಗೆ ಸಲಾಂ ಕೊಡಲು ಒಂದು ಜಾಗದಲ್ಲಿ ನೆರವೇರುತ್ತವೆ ಅದನ್ನು ನೋಡಲು ಸುತ್ತ 10 ಹಳ್ಳಿಯ ಜನ ಸೇರಿ ದೇವರ ಆಶೀರ್ವಾದ ಪಡೆಯುವುದರ ಜೊತೆಗೆ ಸಲಾಂ ಕೊಡುವುದನ್ನು ಕಣ್ತುಂಬಿ ಕೊಳ್ಳುತ್ತಾರೆ.
ಹೆಜ್ಜೆ ಆಟ ನೋಡಲು ಬಲು ಚಂದ
ಇನ್ನು ಮೊಹರಂ ಕೊನೆಯ ದಿನದಂದು ರಾತ್ರಿ ಹೊತ್ತಿನಲ್ಲಿ ದೇವರುಗಳನ್ನು ಹೊತ್ತುಕೊಂಡು ಮೆರವಣೆ ಮಾಡಿಕೊಂಡು ಸಾಂಪ್ರದಾಯ ಪದ್ಧತಿ ಪ್ರಕಾರ ಗೀಗಿ ಪದ, ಜಾನಪದ ಹಾಡುಗಳ ಜೊತೆಗೆ ಯುವಕರು ತಲೆಗೆ ರಿಬ್ಬನ್ ಕಟ್ಟಿ ಕೋಲಾಟ ಆಡುವುದಂತು ನೋಡಲು ಬಲುಚಂದ. ಈ ಹೆಜ್ಜೆ ಆಟವನ್ನು ಹಿರಿಯರು ಸೇರಿದಂತೆ ಯುವಕರು ಯಾವುದೇ ಭೇದಭಾವವಿಲ್ಲದೆ ಮೈ ಮರೆತು ಕುಣಿಯುತ್ತಾರೆ.
ಮೊಹರಂ ಕೊನೆಯ ದಿನದಂದು ಸಂಜೆ 6 ಗಂಟೆಯಿಂದ ಹಿಡಿದು 11:00 ವರೆಗೆ ದೇವರುಗಳೆಲ್ಲ ಮೆರವಣಿಗೆ ಮೂಲಕ ಸಾಗುತ್ತವೆ. ಇನ್ನು ಕೊನೆಯದಾಗಿ ಊರ ಜನರೆಲ್ಲರೂ ಸೇರಿಕೊಂಡು ಬಹಳ ಸಡಗರ ಸಂಭ್ರಮದಿಂದ ದೇವರನ್ನು ಹೊಳೆಗೆ ಕಳಿಸುತ್ತಾರೆ.
ಈ ಹಬ್ಬವನ್ನು ಕೇವಲ ಸಂಕನೂರು ಗ್ರಾಮದಲ್ಲಿ ಮುಸ್ಲಿಂ ಬಾಂಧವರು ಮಾತ್ರ ಆಚರಿಸದೆ ಎಲ್ಲಾ ಹಿಂದೂ ಬಾಂಧವರು ಸೇರಿಕೊಂಡು ಈ ಹಬ್ಬವನ್ನು ಆಚರಿಸುವುದಂತು ಅಪರೂಪದ ಸಂಗತಿಯಾಗಿದೆ.
