ಬೆಂಗಳೂರು: ಬೆಂಗಳೂರು ನಗರವನ್ನು ಉನ್ನತ ಮಟ್ಟಕ್ಕೆ ಬೆಳೆಸಿದ ಹೆಮ್ಮೆಯ ನಾಯಕ ಕೆಂಪೇಗೌಡ ಅವರ ಜಯಂತಿಯನ್ನು ಇಂದು (ಶುಕ್ರವಾರ ಜೂನ್ 27) ನಗರದಾದ್ಯಂತ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಬೆಂಗಳೂರಿನ ವಿಧಾನಸೌಧದ ಪೂರ್ವ ದಿಕ್ಕಿನಲ್ಲಿ ರುವ ನಾಡಪ್ರಭು ಕೆಂಪೇಗೌಡ ರವರ 516 ನೇ ಜಯಂತಿಯ ಅಂಗವಾಗಿ ಕೆಂಪೇಗೌಡ ಅವರ ಪ್ರತಿಮೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಲಾರ್ಪಣೆ ಮಾಡಿದರು.
ನಂತರ ಮಾತನಾಡಿದ ಅವರು, ಕೆಂಪೇಗೌಡರು ದಕ್ಷ ಹಾಗೂ ದೂರದೃಷ್ಟಿಯಿದ್ದಂತಹ ಆಡಳಿತಗಾರ. ಆಧುನಿಕ ಬೆಂಗಳೂರಿನ ನಿರ್ಮಾತೃ ಎಂದು ತಿಳಿಸಿದರು. ಕೆಂಪೇಗೌಡರ 516ನೇ ಜಯಂತಿಯನ್ನು ಸರ್ಕಾರ, ಕಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಬಿಬಿಎಂಪಿ ಸಹಯೋಗದಲ್ಲಿ ಆಚರಿಸಲಾಗುತ್ತಿದೆ. 2013-18 ರ ಅವಧಿಯಲ್ಲಿ ನಮ್ಮ ಸರ್ಕಾರ ನಿರ್ಮಲಾನಂದ ಸ್ವಾಮೀಜಿ ಅವರೊಂದಿಗೆ ಚರ್ಚೆ ಮಾಡಿ ಜನ್ಮದಿನಾಂಕವನ್ನು ತಿಳಿದು, ಅಂದಿನಿಂದ ನಿರಂತರವಾಗಿ ಸರ್ಕಾರ ಕೆಂಪೇಗೌಡ ಜಯಂತಿಯನ್ನು ಆಚರಣೆ ಮಾಡುತ್ತಿದೆ. ಬೆಂಗಳೂರು ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದ್ದರೆ ಅದಕ್ಕೆ ಅಡಿಪಾಯ ಹಾಕಿದ್ದು ಕೆಂಪೇಗೌಡರು ಎಂದರು. ಇದನ್ನೂ ಓದಿ: ಕೆಂಪೇಗೌಡರಿಗೆ ಪುಷ್ಪಾರ್ಚನೆ ಮಾಡಿದ ಡಿಕೆಶಿ
ಅವರನ್ನು ಸ್ಮರಿಸುವ ಕೆಲಸವನ್ನು ಸರ್ಕಾರ ಮಾಡಿದೆ. ಬೆಂಗಳೂರಿನ 4 ಭಾಗದಲ್ಲಿ ಗೋಪುರಗಳನ್ನು ಕಟ್ಟಿಸಿದ ಕೆಂಪೇಗೌಡರು ಅಂದೇ ಬೆಂಗಳೂರಿನ ಆಡಳಿತ ಹೇಗಿರಬೇಕೆಂದು ಅರಿತು ವೃತ್ತಿ ಆಧಾರಿತವಾಗಿ ನಗರತ್ ಪೇಟೆ, ಚಿಕ್ಕಪೇಟೆ, ಬಳೆಪೇಟೆ ಸೇರಿದಂತೆ ಅನೇಕ ಪೇಟೆಗಳನ್ನು ತಮ್ಮ ಆಡಳಿತಾವಧಿಯಲ್ಲಿ ನಿರ್ಮಿಸಿದ್ದರು. ಅವರ ಆಡಳಿತ ನಮಗೆಲ್ಲರಿಗೂ ಮಾದರಿ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
