ಚಾಮರಾಜನಗರ: ಚಾಮರಾಜನಗರ ಮಹದೇಶ್ವರ ಬೆಟ್ಟ ವನ್ಯಧಾಮದ ಅರಣ್ಯ ಪ್ರದೇಶದಲ್ಲಿ ತಾಯಿ ನಾಲ್ಕು ಮರಿ ಸೇರಿ ಒಟ್ಟು ಐದು ಹುಲಿಗಳು ಮರಣ ಹೊಂದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಅರಣ್ಯ ಅಧಿಕಾರಿಗಳು ಶಂಕಿತ ನಾಲ್ಕು ಜನ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.
ನಾಲ್ಕು ಜನ ಶಂಕಿತ ಆರೋಪಿಗಳನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸುತ್ತಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ಆರೋಪಿಗಳ ಹೇಳಿಕೆಯನ್ನು ಕಲೆ ಹಾಕುತ್ತಿದ್ದಾರೆ. ಇದನ್ನೂ ಓದಿ: ಮಲೆಮಹದೇಶ್ವರ ಅರಣ್ಯದಲ್ಲಿ ಹುಲಿಗಳು ಮರಣ ಹೊಂದಲು ಕಾರಣವೇನು?
ಇನ್ನು ಮರಣ ಹೊಂದಿರುವ 5 ಹುಲಿಗಳ ಮರಣೋತ್ತರ ಪರೀಕ್ಷೆ ಮುಕ್ತಾಯಗೊಂಡಿದೆ. ನಿನ್ನೆ ತಾಯಿ ಹುಲಿ ಮರಣೋತ್ತರ ಪರೀಕ್ಷೆ ನಡೆದಿತ್ತು. ಇಂದು ನಾಲ್ಕು ಹುಲಿ ಮರಿಗಳ ಮರಣೋತ್ತ ಪರೀಕ್ಷೆಯನ್ನು ವೈದ್ಯರು ನಡೆಸಿದ್ದಾರೆ. ಎಪಿಸಿಸಿಎಫ್ ನೇತೃತ್ವದಲ್ಲಿ, ಪ್ರಾಣಿ ಶಾಸ್ತ್ರಜ್ಞರು ಹಾಗೂ ಪಶು ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆದಿದೆ. ಹುಲಿಗಳ ಮೃತ ದೇಹದ ಪ್ರಮುಖ ಅಂಗಾಂಗಳನ್ನ ಸಿಬ್ಬಂದಿ ಸಂಗ್ರಹಣೆ ಮಾಡಿದ್ದಾರೆ. ಮೂರು ಗುಂಪುಗಳಲ್ಲಿ ಮಾದರಿ ಸಂಗ್ರಹಿಸಿ ಪ್ರತ್ಯೇಕವಾಗಿ ಮೂರು ಲ್ಯಾಬ್ ಗಳಿಗೆ ಸ್ಯಾಂಪಲ್ ಗಳ ರವಾನೆ ಮಾಡಲಾಗಿದೆ.
