ಮಂಡ್ಯ: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಇದರಿಂದ ಕೆಲವು ಅನಾಹುತ ಸೃಷ್ಟಿಯಾಗುವುದರ ಜೊತೆಗೆ ರಾಜ್ಯದಲ್ಲಿರುವ ಕೆಲ ಜಲಾಶಯಗಳಿಗೆ ಕಳೆ ಬಂದಂತೆ ಕಾಣುತ್ತಿದೆ.
ಹೌದು, ಕರ್ನಾಟಕ ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಆಗುತ್ತಿದ್ದು, ಇದರಿಂದ ಕೆರೆಕಟ್ಟೆಗಳೆಲ್ಲ ತುಂಬಿ ತುಳುಕುತ್ತಿವೆ.
ಇನ್ನು ಕೆಲವು ಪ್ರಮುಖ ಜಲಾಶಯಗಳಂತೂ ನೀರಿನಿಂದ ತುಂಬಿ ತುಳುಕುತ್ತಿದ್ದು ಇದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಅದರಂತೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಡ್ಯಾಂನ ಒಳ ಹರಿವಿನಲ್ಲಿ ಮತ್ತಷ್ಟು ಹೆಚ್ಚಳವಾಗಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ ಎನ್ನಲಾಗಿದೆ. ಸುಮಾರು 29,368 ಕ್ಯೂಸೆಕ್ಗೆ ಒಳ ಹರಿವು ಏರಿಕೆ ಆಗಿದೆ. ಸದ್ಯ ಕನ್ನಂಬಾಡಿ ಕಟ್ಟೆ 113 ಅಡಿಗೆ ಭರ್ತಿ ಆಗಿದೆ. 124.80 ಅಡಿ ಗರಿಷ್ಠ ಮಟ್ಟವನ್ನು ಕೆಆರ್ಎಸ್ ಹೊಂದಿದೆ. ಸಂಪೂರ್ಣ ಭರ್ತಿಗೆ ಕೇವಲ 11 ಅಡಿ ಮಾತ್ರ ಬಾಕಿಯಿದೆ. ಸದ್ಯ ಡ್ಯಾಂನಲ್ಲಿ 35.118 ಟಿಎಂಸಿ ನೀರು ಸಂಗ್ರಹವಾಗಿದೆ.
