ಶಹಾಪುರ: ನಗರದ ಭೀಮರಾನಗುಡಿ ಕೃಷಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆದ 2025-26ನೇ ಸಾಲಿನ ಮುಂಗಾರು ಹಬ್ಬ ಮತ್ತು ನೈಸರ್ಗಿಕ ಕೃಷಿ ಕಾರ್ಯಗಾರ ಹಾಗೂ ಕೃಷಿ ಪರಿಕರ ಮಾರಾಟಗಾರರಿಗೆ ಕಾನೂನು ಅರಿವು ಕಾರ್ಯಗಾರ ಕಾರ್ಯಕ್ರಮದಲ್ಲಿ ರೈತ ಮುಖಂಡ ಚೆನ್ನಪ್ಪ ಆನೇಗುಂದಿ ಅವರು ಕೃಷಿ ಪರಿಕರ ಮಾರಾಟಗಾರರಿಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಕೃಷಿ ಪರಿಕರ ಮಾರಾಟಗಾರರ ಸಂಘದ ವತಿಯಿಂದ ಭೀಮರಾಯನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿಜ್ಞಾನಿಗಳಿಗೆ ಮಾತನಾಡಲು ಅವಕಾಶ ಕೊಡದೇ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿ ರಸಗೊಬ್ಬರ, ಕ್ರಿಮಿನಾಶಕ ಔಷಧಿ ಮಾರುವ ಗೊಬ್ಬರದ ಅಂಗಡಿ ಮಾಲೀಕರಿಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ವಿಷಯದ ಕುರಿತು ಹೆಚ್ಚು ಕಾವು ಮೂಡಿದ್ದರಿಂದ ಠಾಣೆಯ ಎದುರು ದೊಡ್ಡ ಮಟ್ಟದಲ್ಲಿ ಕೃಷಿ ಪರಿಕರಗಳ ಮಾರಾಟಗಾರರು ಜಮಾವಣೆಗೊಂಡಿದ್ದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಬಸನಗೌಡ, ಸಿದ್ರಾಮರೆಡ್ಡಿ ಪಾಟೀಲ್, ಅಶೋಕರೆಡ್ಡಿ ಲಿಂಗದಳ್ಳಿ, ಸಂಗಾರೆಡ್ಡಿ ಹತ್ತಿಕುಣಿ, ಶಿವುಕುಮಾರ ಮೇಲಿನಮನಿ, ಪರ್ವತರೆಡ್ಡಿ ಮಲ್ಹಾರ, ಶರಣು ಪಡಶೆಟ್ಟಿ ಸೇರಿದಂತೆ ಇತರರು ಇದ್ದರು.
ಅನ್ನದಾತರಿಗೆ ಕುತ್ತಿಗೆ ಕೊಯ್ಯುವ ಕೆಲಸ ನಡಿತಿದೆ
ಕಳೆದ ಬಾರಿ ಮುಂಗಾರು ಸಮಯದಲ್ಲಿ ಇದೆ ಕೃಷಿ ಪರಿಕರಗಳ ಮಾರಾಟಗಾರರು ಬೀಜಗಳ ಕೃತಕ ಅಭಾವ ಸೃಷ್ಟಿಸಿ ನಕಲಿ ಬೀಜ, ರಸಗೊಬ್ಬರ ಮಾರಾಟ ಮಾಡಿ ಎಷ್ಟೋ ಅನ್ನದಾತರು ಬೆಳೆ ಕೈಗೆ ಬರದೇ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳಿಗೆ, ಮತ್ತು ಇದಕ್ಕಾಗಿಯೇ ಪರಿಶೀಲನೆಗೆಂದು ಕುಚನೂರ, ನಿಡಗುಂದಿ ಎನ್ನುವ 2 ಕಮಿಟಿ ಅಧ್ಯಕ್ಷರ ನೇತೃತ್ವದಲ್ಲಿ ತನಿಖೆ ಸಹ ಮಾಡಿ ಕೇವಲ ಶೇ.30 ರಷ್ಟು ಬೆಳೆಗಳು ಹಾಳಾಗಿವೆ ಎನ್ನುವ ವರದಿಯನ್ನು ನೀಡಿದ್ದಾರೆ. ಮತ್ತು ಶೇ.99 ರಷ್ಟು ಬೀಜಗಳು ಸರಿಯಾಗಿವೆ ಎಂದು ವರದಿ ಸಲ್ಲಿಸಿದ್ದಾರೆ. ಇದರಿಂದ ಕೃಷಿ ತಜ್ಞರ ಭ್ರಷ್ಟಚಾರ ದಿಂದ ಸುಳ್ಳು ವರದಿ ನೀಡಿದ್ದಾರೆ ಮತ್ತು ಮಾರಾಟಗಾರರು ಸೇರಿ ಅನ್ನದಾತರಿಗೆ ಕುತ್ತಿಗೆ ಕೊಯ್ಯುವ ಕೆಲಸ ಮಾಡಿದ್ದಾರೆ. ಈಗಲೂ ಸಹ ಅದೇ ಚಾಳಿ ಮುಂದುವರೆಸಿದ್ದಾರೆ. ಈಗ ತಮಗೆ ಕುತ್ತು ಬರುತ್ತದೆ ಎನ್ನುವ ಕಾರಣಕ್ಕೆ ರೊಚ್ಚಿಗೆದ್ದಿದ್ದಾರೆ ಎಂದು ರೈತ ಮುಖಂಡರಾದ ಚೆನ್ನಪ್ಪ ಆನೇಗುಂದಿ ಹೇಳಿದರು. ಇದನ್ನೂ ಓದಿ: ಕಮಲ್ ಹಾಸನ್ ಗೆ ನಾರಾಯಣಗೌಡ ಖಡಕ್ ಎಚ್ಚರಿಕೆ!
