ಶಹಾಪುರ: ರಾಜ್ಯದ ಕಾಂಗ್ರೆಸ್ ಸರ್ಕಾರ ಯಶಸ್ವಿಯಾಗಿ ಎರಡು ವರ್ಷ ಪೂರೈಸಿದ್ದು, ಇದರ ಹಿನ್ನಲೇ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಮೇ. 20 ರಂದು ನಡೆಯಲಿರುವ ಕಾಂಗ್ರೆಸ್ ಸರ್ಕಾರ ಸಾಧನಾ ಸೇಮಾವೇಶದಲ್ಲಿ ಯಾದಗಿರಿ ಜಿಲ್ಲೆಯಿಂದ 10 ಸಾವಿರ ಜನ ಸೇರುವ ನಿರೀಕ್ಷೆಯಿದ್ದು, ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಪಾಲ್ಗೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.
ಭೀಮರಾಯನಗುಡಿಯ ಪ್ರವಾಸಿ ಮಂದಿರದಲ್ಲಿ ಪೂರ್ವಭಾವಿ ಸಭೆ ನಡೆಸಿ ಕಾರ್ಯಕ್ರಮದ ರೂಪರೇಷಗಳ ಕುರಿತು ಮಾತನಾಡಿದ ಅವರು, ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರುವ ನಿರೀಕ್ಷೆ ಇದೆ. ಇನ್ನು ಮುಖ್ಯಮಂತ್ರಿ, ಡಿಸಿಎಂ ಹಾಗೂ ಎಲ್ಲ ಸಚಿವರು ಪಾಲ್ಗೊಳ್ಳುವರು. ಸಮಾರಂಭದಲ್ಲಿ ಹಾಡಿ-ಹಟ್ಟಿ ತಾಂಡಾಗಳ ನಿವಾಸಿಗಳಿಗೆ ಸುಮಾರು ಒಂದು ಲಕ್ಷ ಕುಟುಂಬಗಳಿಗೆ ಹಕ್ಕು ಪತ್ರಗಳನ್ನು ವಿತರಿಸಲಾಗುವುದು. ಈಗಾಗಲೇ ಸಕಲ ಸಿದ್ದತೆಗೆ ತಯಾರಿ ನಡೆದಿದೆ. ಇಲ್ಲಿಂದ ಕಾರ್ಯಕ್ರಮಕ್ಕೆ ತೆರಳಲು 150 ಕ್ಕೂ ಹೆಚ್ಚು ವಾಹನಗಳ ವ್ಯವಸ್ಥೆ ಸಹ ಇರಲಿದೆ. ಕಾರ್ಯಕ್ರಮದಲ್ಲಿ ಕುಡಿಯುವ ನೀರು, ಊಟದ ವ್ಯವಸ್ಥೆ ಸಹ ಇರಲಿದೆ. ಆದ್ದರಿಂದ ಜಿಲ್ಲೆ, ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಮುಖಂಡರು ಕಾರ್ಯಕರ್ತರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಬೇಕು ಎಂದರು. ಇದನ್ನೂ ಓದಿ: ಮೇ 20 ರಂದು ರಾಜ್ಯ ಸರ್ಕಾರದ 2ನೇ ವರ್ಷದ ಸಾಧನೆ ಸಮಾವೇಶ ಕಾರ್ಯಕ್ರಮ
ಕಾಂಗ್ರೆಸ್ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಮೇ. 20 ಕ್ಕೆ ಎರಡು ವರ್ಷ ಪೂರ್ಣಗೊಳ್ಳಲಿದೆ. ಸರ್ಕಾರದ ಸಾಧನೆಯನ್ನು ತಿಳಿಸಲು. ಸಾಧನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಚಳ್ಳಿಕೆರೆ ಶಾಸಕ ಟಿ.ರಘುಮೂರ್ತಿ ಹೇಳಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಮಾಹಂತ ಚಂದಾಪುರ, ಶರಣಪ್ಪ ಸಲಾದಪುರ, ಶಂಕ್ರಣ್ಣ ವಣಿಕ್ಯಾಳ, ಗೌಡಪ್ಪಗೌಡ ಆಲ್ದಾಳ, ನೀಲಕಂಠ ಬಡಿಗೇರ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಸಿದ್ದು ಆರಬೋಳ, ಅಲ್ಲಾ ಪಟೇಲ್ ಮಕ್ತಾಪುರ, ಸಣ್ಣ ನಿಂಗಣ್ಣ ನಾಯ್ಕೊಡಿ ಸೇರಿದಂತೆ ಕಾರ್ಯಕರ್ತರು, ಪಕ್ಷದ ಮುಖಂಡರು ಇದ್ದರು.
