ರಾಮನಗರ: ಆಪರೇಷನ್ ಸಿಂಧೂರದ ಬಗ್ಗೆ ಕಾಂಗ್ರೆಸ್ ಶಾಸಕ ಮಾತನಾಡಿದ್ದಾರೆ ಎಂಬ ಪ್ರಶ್ನೆ ಇದೀಗ ರಾಜ್ಯ ರಾಜಕೀಯದಲ್ಲಿ ಬಿರುಗಾಳಿಯಲ್ಲಿ ಎಬ್ಬಿಸಿದ್ದು, ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿರುವ ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷದ ವಿರುದ್ಧ ಕೆಂಡಮಂಡಲವಾಗಿದ್ದಾರೆ.
ಇನ್ನು ಆಪರೇಷನ್ ಸಿಂಧೂರ ಮತ್ತು ಸೇನೆಯ ವಿರುದ್ಧವಾಗಿ ಕಾಂಗ್ರೆಸ್ ಶಾಸಕ ಮಾತನಡಿರಲು ಸಾಧ್ಯವಿಲ್ಲ. ಅವರು ಕೇವಲ ಬಿಜೆಪಿಯವರ ವಿರುದ್ಧ ಮಾತನಾಡಿರುತ್ತಾರೆಯೇ ಹೊರತಾಗಿ ಸೇನೆಯ ವಿರುದ್ಧ ಮಾತನಾಡಿರಲು ಸಾಧ್ಯವಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಹೇಳಿದ್ದಾರೆ.
ಈ ಕುರಿತು ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆಪರೇಷನ್ ಸಿಂಧೂರದ ಬಗ್ಗೆ ಕಾಂಗ್ರೆಸ್ ಶಾಸಕ ಕೊತ್ತನೂರು ಮಂಜುನಾಥ್ ಹಗುರವಾಗಿ ಮಾತಾಡಿರಲಾರರು, ಆದರೆ ಬಿಜೆಪಿ ನಾಯಕರ ಬಗ್ಗೆ ಮಾತಾಡಿರುವ ಸಾಧ್ಯತೆ ಇದೆಯೆಂದು ಹೇಳಿದರು.
ಕೊತ್ತನೂರು ಮಂಜುನಾಥ್ ಅಪ್ಪಟ ದೇಶಪ್ರೇಮಿ, ದೇಶ ಮತ್ತು ಸೇನೆಯ ವಿರುದ್ಧ ಮಾತಾಡುವ ಜಾಯಮಾನ ಅವರದ್ದಲ್ಲ, ಯುದ್ಧ ಮುಂದುವರಿದಿದ್ದರೆ ನಮ್ಮ ಸೇನೆ ಪಾಕಿಸ್ತಾನವನ್ನು ಬಗ್ಗು ಬಡಿಯುತಿತ್ತು ಎಂದು ಅವರು ಹೇಳಿರಬಹುದು ಅದರೆ ಸೇನೆಯ ವಕ್ತಾರರು ಹಂಚಿಕೊಂಡಿರುವ ಮಾಹಿತಿಯನ್ನು ಯಾರೂ ಪ್ರಶ್ನಿಸಲಾಗದು ಎಂದು ಸಚಿವ ಹೇಳಿದರು.
