ಶಹಾಪುರ: ನಗರದ ಬಿಸಿಎಮ್ ವಸತಿ ನಿಲಯದ ಎದುರು ವಾರ್ಡ್ ನಂ 30 ರಿಂದ 31 ಕ್ಕೆ ತೆರಳುವ ರಸ್ತೆಯಲ್ಲಿ ಚರಂಡಿ ಕಾಮಗಾರಿಯನ್ನು ನಗರಸಭೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸೇರಿಕೊಂಡು ಅವೈಜ್ಞಾನಿಕವಾಗಿ ನಿರ್ಮಿಸಿದ್ದು ಇದಕ್ಕೆ ಬಡವಣೆಯ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕೆಲ ತಿಂಗಳುಗಳ ಹಿಂದೆ ನಗರೋತ್ಥಾನ ಅಡಿಯಲ್ಲಿ ವಿವಿಧ ಬಡಾವಣೆಗಳಲ್ಲಿ ಚರಂಡಿ, ರಸ್ತೆ ಕಾಮಗಾರಿಗೆ ಕೋಟ್ಯಾಂತರ ಅನುದಾನ ಮಂಜೂರಿಯಾಗಿದೆ. ಇದು ಬಡವಣೆಯ ಜನತೆಗೆ ಅನುಕೂಲವಾಗಲಿ ಎನ್ನುವ ನಿಟ್ಟಿನಲ್ಲಿ ಅನುದಾನ ಬಂದಿದೆ. ಆದರೆ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಬೇಕಾಬಿಟ್ಟಿಯಾಗಿ ಅಳತೆಯಿಲ್ಲದೆ ಅವೈಜ್ಞಾನಿಕವಾಗಿ ಚರಂಡಿ ನಿರ್ಮಿಸಿದ್ದು ಇದೀಗ ಜನತೆ ಕಷ್ಟ ಅನುಭವಿಸುವಂತಾಗಿದೆ. ಬೇಕಾಬಿಟ್ಟಿಯಾಗಿ ಕಾಮಗಾರಿ ಮಾಡಿ ಬಿಲ್ ಮಾಡಿಕೊಂಡಿದ್ದು ಇದೀಗ ಕಾಮಗಾರಿ ಮಾಡಿದರೂ ಪ್ರಯೋಜನಕ್ಕೆ ಬಾರದಂತಾಗಿದೆ. ಇದನ್ನೂ ಓದಿ: ಅರಮನೆ ಮೈದಾನ ಬಳಕೆಗೆ ಸರ್ಕಾರದ ಮುಂದಿನ ನಡೆ ಏನು?
ಕೆಲವೆಡೆ ಚರಂಡಿಗಾಗಿ ಗುಂಡಿಯನ್ನು ತೋಡಿ ಬಿಡಲಾಗಿದೆ. ಇನ್ನೊಂದೆಡೆ ಕಾಮಗಾರಿಯನ್ನು ಮಾಡಬೇಕಾದರೆ ಅಧಿಕಾರಿಗಳ ಸೂಚನೆಯಂತೆ ಕಾಮಗಾರಿಯನ್ನು ಪೂರ್ಣಗೊಳಿಸುವುದು ರೂಢಿ ಆದರೆ ಇಲ್ಲಿ ಅದರ ಕನಿಷ್ಠ ಜ್ಞಾನ ಇಲ್ಲದೇ ಗುತ್ತಿಗೆದಾರ ಕಾಮಗಾರಿಯನ್ನು ಮಾಡಿದ್ದು, ಇದರಲ್ಲಿ ಅಧಿಕಾರಿಗಳು ಸಹ ಶಾಮೀಲಾಗಿ ಕಾಮಗಾರಿ ಮಾಡಿ ಹಣ ನುಂಗಿದ್ದಾರೆ ಎನ್ನುವ ಅನುಮಾನ ಜನರಲ್ಲಿ ಮೂಡಿದೆ.
ಅವೈಜ್ಞಾನಿಕ ಚರಂಡಿಯಿಂದಾಗಿ ಜನತೆಯನ್ನು ಹೈರಾಣು ಮಾಡುತ್ತಿದ್ದಾರೆ. ಅಧಿಕಾರಿಗಳ ನಿರಾಸಕ್ತಿಯಿಂದ ಭವಿಷ್ಯದಲ್ಲಿ ಮತ್ತಷ್ಟು ಸಮಸ್ಯೆಗಳು ಸೃಷ್ಠಿಯಾಗುವ ಲಕ್ಷಣ ಕಂಡು ಬರುತ್ತಿದೆ.
ಕೊಳಚೆ ನೀರು ಮಡುಗಟ್ಟಿದೆ, ಚರಂಡಿಯಲ್ಲಿ ಸಮರ್ಪಕವಾಗಿ ನಿರ್ಮಿಸಿಲ್ಲ, ಸರಗವಾಗಿ ನೀರು ಹರಿಯುತ್ತಿಲ್ಲಾ. ನೀರು ನಿಂತು ವಾತಾವರಣ ಗಬ್ಬೆದ್ದು ನಾರುತ್ತಿದೆ. ಇನ್ನೂ ಕೆಲವೆಡೆ ಮನೆಗಳಿಗೆ ಚರಂಡಿ ನೀರು ನುಗ್ಗುತ್ತಿವೆ. ಆದ್ದರಿಂದ ಜನ ಬೇಸತ್ತು ಸ್ವಯಂಪ್ರೇರಿತ ಮಣ್ಣು ಹಾಕುವ ಕೆಲಸ ಮಾಡುತ್ತಿದ್ದಾರೆ. ಚರಂಡಿಯಲ್ಲಿ ಕೊಳಚೆ ನೀರು ನಿಂತಿರುವುದರಿಂದ ಸಾಂಕ್ರಾಮಿಕ ರೋಗ ಹರಡುವ ಬೀತಿ ಎದುರಾಗಿದೆ. ಸಂಜೆ ವೇಳೆ ವಿಪರೀತ ಸೊಳ್ಳೆ ಕಾಟವಿದ್ದು, ರಸ್ತೆಯಲ್ಲಿ ತಿರುಗಾಡುವವರು ಮೂಗು ಮುಚ್ಚಿಕೊಂಡು ರಸ್ತೆಯಲ್ಲಿ ಓಡಾಡುವ ಪರಿಸ್ಥೀತಿ ಇದೆ ಎಂದು ಬಡವಣೆಯ ಜನತೆ ಆರೋಪಿಸಿದ್ದಾರೆ.
ಇದು ಗಮನಕ್ಕೆ ಬಂದರೂ ನಗರಸಭೆ ಅಧಿಕಾರಿಗಳು ಕೈಕಟ್ಟಿ ಕುಳಿತಿದ್ದಾರೆ. ದುರ್ವಾಸನೆಯ ನಡುವೆ ಬಡಾವಣೆಯ ಜನತೆ ಕಾಲ ಕಳೆಯುವಂತಾಗಿದೆ. ಚರಂಡಿ ಕಾಮಗಾರಿಯನ್ನು ಗಮನಿಸಿದರೆ ಅನುದಾನವನ್ನು ಅಧಿಕಾರಿಗಳು ಯಾವ ರೀತಿಯಲ್ಲಿ ಪೋಲು ಮಾಡುತ್ತಿದ್ದಾರೆ ಎಂಬುವುದು ಗೋಚರಿಸುತ್ತದೆ.
ನಿಯಮಗಳನ್ನೇ ಗಾಳಿಗೆ ತೂರಿ ಚರಂಡಿ ಕಾಮಗಾರಿ ನಡೆದಿದೆ. ಅವೈಜ್ಞಾನಿಕ ಕಾಮಗಾರಿಯ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಕೇವಲ ಉಡಾಫೆ ಉತ್ತರ ನೀಡುವಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡದೆ ಅವ್ಯವಸ್ಥಿತ ಕಾಮಗಾರಿಗೆ ಪ್ರೋತ್ಸಾಹ ನೀಡಿದ್ದಾರೆ ಎಂದು ಬಡಾವಣೆಯ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಡ್ರೈನೇಜ್ ನಿರ್ಮಾಣ ಮಾಡುವಾಗ ಬಡಾವಣೆಯ ಕೆಲ ನಿವಾಸಿಗಳು ತಕರಾರು ಮಾಡಿದ್ದರು, ಕಾಮಗಾರಿಯ ಬಗ್ಗೆ ಗುತ್ತಿಗೆದಾರರಿಗೂ ಸಹ ಸೂಚಿಸಲಾಗಿದೆ. ಆದರೆ ಸುಳ್ಳು ಹೇಳುವುದೇ ಉದ್ಯೋಗವಾಗಿಸಿಕೊಂಡಿದ್ದು, ಕೂಡಲೇ ಗುತ್ತಿಗೆದಾರನ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಮತ್ತು ಮುಂದಿನ ವಾರದಲ್ಲಿ ನಗರಸಭೆ ವತಿಯಿಂದ ಟೆಂಡರ್ ಮಾಡಿ ಪುನಃ ಕಾಮಗಾರಿ ಮಾಡಲಾಗುವುದು ಎಂದು ನಗರಸಭೆ ಎಇಇ ನಾನಾಸಾಬ್ ರವರು ಹೇಳಿದ್ದಾರೆ.
