ಶಹಾಪುರ: ಕಷ್ಟಪಟ್ಟು ಬೆಳೆದ ಬೆಳೆ ಉಳಿಸಿಕೊಳ್ಳಲು ನೀರಿನ ಅವಶ್ಯಕತೆ ಹೆಚ್ಚಾಗಿದ್ದರಿಂದ ನಿರಂತರ ರೈತ ಹೋರಾಟಗಾರರು ಪ್ರತಿಭಟನೆ ನಡೆಸಿದ್ದರ ಫಲವಾಗಿ ಸರ್ಕಾರ ನೀರು ಹರಿಸುವ ಭರವಸೆ ನೀಡಿದ್ದರಿಂದ ಶನಿವಾರ ರಾತ್ರಿ ರೈತರು ಪ್ರತಿಭಟನೆಯನ್ನು ಹಿಂಪಡೆದಿದ್ದರು, ಇದೀಗ ಮೂರು ದಿನಗಳ ವರೆಗೆ ೪ ಸಾವಿರ ಕ್ಯುಸೆಕ್ ಹಾಗೂ ಬಲದಂತೆ ಕಾಲುವೆಗೆ ೧ ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲು ಸರ್ಕಾರ ಅನುಮೋದನೆ ನೀಡಿದೆ ಆದರೆ ಅಧಿಕಾರಿಗಳ ತಾರತಮ್ಯ ನೀತಿಯಿಂದ ಕೊನೆ ಭಾಗದ ರೈತರಿಗೆ ನೀರು ಸಿಗುವುದಿಲ್ಲ ಇದರಿಂದ ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಹಚ್ಚಿದಂತೆ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಮಂಗಳವಾರ ಭೀಮರಾಯನಗುಡಿ ಕೆ.ಬಿ.ಜೆ.ಎನ್.ಎಲ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಪಾಂಡ್ವೆ ರಾಹುಲ್ ನೇತೃತ್ವದಲ್ಲಿ ಅನ್ನದಾತರ ಸಭೆ ಜರುಗಿತು. ನ.24 ರಿಂದ 26 ರವರೆಗೆ ಮೂರು ದಿನಗಳ ಕಾಲ ನೀರು ಬಿಡುಗಡೆ ಮಾಡಲು ನಿರ್ಧರಿಸಿದ್ದು ಕಾಲುವೆಗೆ ಒಂದೂವರೆ ಟಿಎಂಸಿ ನೀರನ್ನು ಹರಿಸಲು ನೀರಾವರಿ ಸಲಹಾ ಸಮಿತಿಯಲ್ಲಿ ಅನುಮೋದನೆ ನೀಡಲಾಗಿದ್ದು.
ನ.25 ರಂದು ಭೀಮರಾಯನಗುಡಿ 500 ಕ್ಯೂಸೆಕ್, ಮುದಬಾಳ ಶಾಖಾ ಕಾಲುವೆಗೆ 1000 ಕ್ಯೂಸೆಕ್, ಖಾನಾಪುರ ಕಾಲುವೆಗೆ 700 ಕ್ಯೂಸೆಕ್, ಜೇವರ್ಗಿ ಶಾಖಾ ಕಾಲುವೆಗೆ 700 ಕ್ಯೂಸೆಕ್ ನೀರು ಹರಿಬಿಡಲಾಗುವುದು, ಇನ್ನೂ ದಿನಾಂಕ 26 ರಂದು ಭೀಮರಾಯನಗುಡಿ 250 ಕ್ಯೂಸೆಕ್, ಖಾನಾಪುರ 1200 ಕ್ಯೂಸೆಕ್, ಜೇವರ್ಗಿ 70 ಕ್ಯೂಸೆಕ್ ನೀರು ಹರಿಸಲಾಗುವುದು. ದಿ. 27 ರಂದು ಭೀಮರಾಯನಗುಡಿ ಚಿಗರಳ್ಳಿ ಕಾಲುವೆಗೆ 600 ಕ್ಯೂಸೆಕ್, ಜೇವರ್ಗಿ 700 ಕ್ಯೂಸೆಕ್ ನೀರು ಹೀಗೆ ಮೂರು ದಿನಗಳ ವರೆಗೆ ನೀರು ಕೊಡಲಾಗುವುದು ಎಂದು ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ವಿವರಿಸಿದರು.
ಈಗಾಗಲೇ ಕೆಬಿಜೆಎನ್‌ಎಲ್ ಅಧಿಕಾರಿಗಳಿಂದ ನೀರು ಬಿಡುಗಡೆಯಾಗಿದ್ದು, ಮೆಣಸಿನಕಾಯಿ, ಹತ್ತಿ ಬೆಳೆ ಒಣಗುವ ಆತಂಕದಲ್ಲಿದ್ದ ರೈತರಿಗೆ ಕೊಂಚ ಸಮಾಧಾನ ಸಿಕ್ಕಂತಾಗಿದೆ, ಹೊರತು ಇದರಿಂದ ಕೊನೆಯ ಭಾಗದ ಜಮೀನಿಗೆ ನೀರು ತಲುಪಲ್ಲಾ ಎಂದು ರೈತ ಮುಖಂಡರು ವಿರೋಧ ವ್ಯಕ್ತಪಡಿಸಿದರು.
ಕಾಲುವೆಗೆ ವಿಂಗಡಿಸಿ ನೀರು ಬಿಟ್ಟರೆ ಕೊನೆ ಭಾಗದ ವರೆಗೆ ರೈತರ ಹೊಲಗಳಿಗೆ ನೀರು ಸಿಗುವುದಿಲ್ಲ ಆದ್ದರಿಂದ ವೈಜ್ಞಾನಿಕವಾಗಿ ಸರಿಯಾಗಿ ಕಾಲುವೆಯ ಕೊನೆಯ ಭಾಗÀದ ವರೆಗೆ ನೀರು ವಿತರಣೆ ಮಾಡಬೇಕು ಎಂದು ರೈತ ಮುಖಂಡರು ಪಟ್ಟು ಹಿಡಿದರು.
ರೈತರ ಹೋರಾಟಕ್ಕೆ ಮಣಿದ ಸರ್ಕಾರ ನೀರು ಹರಿಸಲು ಅನುಮೋದನೆ
ರೈತರ ಹೋರಾಟಕ್ಕೆ ಮಣಿದ ಸರ್ಕಾರ ನೀರು ಹರಿಸಲು ಅನುಮೋದನೆ ನೀಡಿದ್ದು, ಅಲ್ಪ ಪ್ರಮಾಣದ ನೀರಿನಿಂದ ಈ ಒಬ್ಬ ರೈತನ ಕಣ್ಣಿಗೆ ಬೆಣ್ಣೆ, ಮತ್ತೊಬ್ಬರ ಕಣ್ಣಿಗೆ ಸುಣ್ಣ ಬಳಿದಂತಾಗಿದೆ ಎಂದು ರೈತ ಮುಖಂಡ ಚೆನ್ನಪ್ಪ ಆನೇಗುಂದಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇದರಿಂದ ಕೊನೆಯ ಭಾಗದ ರೈತರಿಗೆ ನೀರು ಸಿಗುವುದಿಲ್ಲ. ಆದ್ದರಿಂದ ಸಂಪೂರ್ಣ ರೈತರಿಗೆ ಅನುಕೂಲ ಆಗುವ ರೀತಿಯಲ್ಲಿ ಅಧಿಕಾರಿಗಳು ನೀರು ಹರಿಸಬೇಕು ಎಂದು ಆಗ್ರಹಿಸಿದರು.
ರೈತರ ನೀರಿನ ಹೊರಾಟಕ್ಕೆ ಅಲ್ಪ ವಿರಾಮ
ಕೊನೆಯ ಭಾಗದ ರೈತರ ಜಮೀನುಗಳಿಗೆ ನೀರು ಸಿಗುವಂತಾಗಬೇಕು. ಇದೀಗ ರೈತರ ನೀರಿನ ಹೊರಾಟಕ್ಕೆ ಅಲ್ಪ ವಿರಾಮ ಮಾತ್ರ ಇಟ್ಟಿದ್ದು, ಅಧಿಕಾರಿಗಳು ಮೂಗಿಗೆ ತುಪ್ಪ ಸವರುವ ಕೆಲಸ ಬಿಟ್ಟು, ಸರಿಯಾಗಿ ನೀರು ಸಿಗಲು ಕ್ರಮ ಕೈಗೊಳ್ಳಬೇಕು. ಕೆಬಿಜೆಎನ್‌ಎಲ್ ಅಧಿಕಾರಿ ರಮೇಶ ಗೋಪು ರಾಠೋಡ ಸರ್ಕಾರಕ್ಕೆ ಒಂದು ವರದಿ ರೈತರಿಗೆ ಒಂದು ಮಾಹಿತಿ ನೀಡಿ ಅನ್ನದಾತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಾರೆ ಎಂದು ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳ ಬೇಜಾವಬ್ದಾರಿಗೆ ನೀರು ಸಿಗದೇ ಹೋದರೆ ಮತ್ತಷ್ಟು ಬಿಗಿಯಾದ ಹೋರಾಟ ನಡೆಸಲಾಗುವುದು, ಇದಕ್ಕೆ ಆಸ್ಪದ ನೀಡದೆ ಸರಿಯಾಗಿ ನೀರು ಹರಿಸಬೇಕು ಎಂದು ರೈತ ಮುಖಂಡರ ಶರಣು ಮಂದ್ರವಾಡ ಹೇಳಿದರು.
ರೈತರಿಗೆ ತೊಂದರೆ ಆಗದಂತೆ ನೀರು ಹರಿಸಬೇಕು
ಸರ್ಕಾರ ಕಾಲುವೆಗೆ ನೀರು ಹರಿಸಲು ಅನುಮೋದನೆ ನೀಡಿದ್ದು, ಕೆಬಿಜೆಎನ್‌ಎಲ್ ಅಧಿಕಾರಿಗಳಿಗೆ ನೀರು ಬಿಡುವ ಜವಾಬ್ದಾರಿ ಇದ್ದು ರೈತರಿಗೆ ತೊಂದರೆ ಆಗದಂತೆ ನೀರು ಹರಿಸಬೇಕು. ಅನ್ನದಾತರಿಗೆ ಯಾರಿಗೂ ಹೆಚ್ಚು ಕಡಿಮೆಯಾಗದಂತೆ ನೀರು ಒದಗಿಸಿ, ಮೂರು ದಿನಗಳ ವರೆಗೆ ಕಾಲುವೆಗೆ ಹರಿಸಿದ ನೀರಿನ ಸಂಪೂರ್ಣ ಮಾಹಿತಿಯನ್ನು ನೀಡಬೇಕು ಎಂದು ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ ತಿಳಿಸಿದರು.
ಈಗೀರುವ ನೀರನ್ನು ಸರಿಯಾಗಿ ರೈತರಿಗೆ ನೀಡಬೇಕಾದ ಅನಿವಾರ್ಯತೆ ಇದೆ. ಸರ್ಕಾರ ರೈತರಿಗೆ ನೀರು ಕೊಡುವ ಕೆಲಸ ಮಾಡಿದ್ದು ಖುಷಿಯ ಸಂಗತಿ, ಆದರೆ ಸ್ವಲ್ಪ ಪ್ರಮಾಣದ ನೀರಿನಿಂದಾಗಿ ಸರಿಯಾಗಿ ನೀರು ಸಿಗದೇ ಹೋದರೆ ರೈತರು ಅಧಿಕಾರಿಗಳ ಮೇಲೆ ಹಲ್ಲೇ ನಡೆಸುವ ಸಂಭವವಿದೆ ಎಂದು ಕೇಲ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದರು.
ಕಾಲುವೆಗೆ ನೀರು ಹರಿಸುವುದಾಗಿ ಘೋಷಣೆ ಮಾಡಿದ ಬೆನ್ನಲ್ಲೇ ಕಾಲುವೆಗೆ ಅಡ್ಡಲಾಗಿ ಮುಂದೆ ನೀರು ಹೋಗದಂತೆ ಕೇಲವರು ಮಣ್ಣನ್ನು ಹಾಕಿದ್ದು, ಇದರಿಂದ ರೈತರ ನಡುವೆ ಘರ್ಷಣೆಗಳು ನಡೆಯುವ ಸಂಭವವಿದ್ದು ಪೊಲೀಸ್ ಇಲಾಖೆಯೇ ಖುದ್ದಾಗಿ ಯಾವ ಪ್ರಬಲ ವ್ಯಕ್ತಿಗಳ ಜಮೀನುಗಳಿದ್ದರು ಮುಲಾಜಿಲ್ಲದೆ ಮಣ್ಣನ್ನು ತೆಗೆಸಿ ಮುಂದಿನ ಭಾಗಕ್ಕೆ ನೀರು ತಲುಪವಂತೆ ಮಾಡಬೇಕು ಎಂದು ರೈತ ಮುಖಂಡರು ಒತ್ತಾಯಿಸಿರು. ಇದಕ್ಕೆ ಜಿಲ್ಲಾಧಿಕಾರಿಗಳು, ಹಾಗೂ ಎಸ್‌ಪಿ ಅವರು ಪೊಲೀಸ್ ಇಲಾಖೆ ಅದನ್ನು ಸರಿಪಡಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಎಸ್‌ಪಿ ಪೃಥ್ವಿಕ್ ಶಂಕರ್, ರೈತ ಮುಖಂಡ ಎಸ್.ಎಂ ಸಾಗರ, ಸೇರಿದಂತೆ ಕೆಬಿಜೆಎನ್‌ಎಲ್ ಅಧಿಕಾರಿಗಳು, ರೈತ ಮುಖಂಡರು ಇದ್ದರು.
