ನವದೆಹಲಿ: ಕ್ಯಾನ್ಸರ್ ರೋಗಿಗಳಿಗೆ ಔಷಧ ಪೂರೈಸುವ ಹೆಸರಿನಲ್ಲಿ ವಂಚನೆ ನಡೆಸಿದ ಆರೋಪ ಎದುರಿಸುತ್ತಿರುವ ಪ್ರಶಾಂತ್ ಬಾಬು ಇದೀಗ ದೆಹಲಿ ಪೊಲೀಸರ ವಶದಲ್ಲಿದ್ದಾನೆ. ಬಾಡಿ ವಾರಂಟ್ ಮೂಲಕ ಆತನನ್ನು ವಶಕ್ಕೆ ಪಡೆದಿರುವ ದೆಹಲಿ ಪೊಲೀಸರು, ಕೋಟ್ಯಂತರ ರೂಪಾಯಿ ವಂಚನೆ ಹಾಗೂ ಕ್ಯಾನ್ಸರ್ ಔಷಧಗಳ ಅಕ್ರಮ ಮಾರಾಟಕ್ಕೆ ಸಂಬಂಧಿಸಿದಂತೆ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಈ ಹಿಂದೆ ಕರ್ನಾಟಕದ ವಿಶೇಷ ತನಿಖಾ ತಂಡ (ಎಸ್‌ಐಟಿ) ಪ್ರಶಾಂತ್ ಬಾಬುವನ್ನು ಬಂಧಿಸಿತ್ತು. ಇದೀಗ ದೆಹಲಿಯ ಮೋತಿಬಾಗ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 2 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಅನುಮತಿ ಪಡೆದು ಆತನನ್ನು ವಶಕ್ಕೆ ಪಡೆಯಲಾಗಿದೆ. ಔಷಧ ಪೂರೈಸುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ ಆರೋಪದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಉಚಿತ ಇಂಜೆಕ್ಷನ್‌ಗಳಲ್ಲೂ ಅಕ್ರಮ ಲಾಭ!
ತನಿಖೆಯ ವೇಳೆ ಕ್ಯಾನ್ಸರ್ ರೋಗಿಗಳಿಗೆ ಸಂಬಂಧಿಸಿದ ಆಘಾತಕಾರಿ ವಂಚನೆಯ ವಿವರಗಳು ಬೆಳಕಿಗೆ ಬಂದಿವೆ. ಸುಮಾರು 5 ಲಕ್ಷ ರೂಪಾಯಿ ಮೌಲ್ಯದ ಎರಡು ಕ್ಯಾನ್ಸರ್ ಇಂಜೆಕ್ಷನ್‌ಗಳನ್ನು ಖರೀದಿಸಿದರೆ, ಕಂಪನಿಯು ಒಂದು ಇಂಜೆಕ್ಷನ್ ಅನ್ನು ಉಚಿತವಾಗಿ ನೀಡುತ್ತಿತ್ತು ಎನ್ನಲಾಗಿದೆ.
ಆದರೆ, ಈ ಕೊಡುಗೆಯ ಬಗ್ಗೆ ರೋಗಿಗಳಿಗೆ ಮಾಹಿತಿ ನೀಡದೆ, ಕಂಪನಿಯಿಂದ ಉಚಿತವಾಗಿ ಸಿಗುತ್ತಿದ್ದ ಇಂಜೆಕ್ಷನ್‌ಗಳನ್ನೂ ಪ್ರಶಾಂತ್ ಬಾಬು ಹಣಕ್ಕೆ ಮಾರಾಟ ಮಾಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ.
ಇದಲ್ಲದೆ, ಇಂಜೆಕ್ಷನ್ ಬಳಸಿದ ಬಳಿಕ ರೋಗಿಯು ಮೃತಪಟ್ಟರೆ, ಉಳಿದ ಇಂಜೆಕ್ಷನ್‌ಗಳನ್ನು ವಾಪಸ್ ಪಡೆದು ಮತ್ತೊಬ್ಬರಿಗೆ ಮೂಲ ಬೆಲೆಗೆ ಮಾರಾಟ ಮಾಡುತ್ತಿದ್ದ ಆರೋಪವೂ ಇದೆ. ಈ ಮೂಲಕ ಕ್ಯಾನ್ಸರ್ ರೋಗಿಗಳ ಸಂಕಷ್ಟವನ್ನೇ ಲಾಭಕ್ಕೆ ಬಳಸಿಕೊಳ್ಳುತ್ತಿದ್ದ ಜಾಲದ ಕಾರ್ಯವೈಖರಿ ತನಿಖೆಯಲ್ಲಿ ಬಹಿರಂಗವಾಗಿದೆ.
ಆರು ರಾಜ್ಯಗಳಲ್ಲಿ ಜಾಲ ವಿಸ್ತರಣೆ
ಈ ವಂಚನೆಯ ಜಾಲ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಆರು ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿತ್ತು ಎನ್ನಲಾಗಿದೆ. ಹತ್ತಾರು ಖಾಸಗಿ ಆಸ್ಪತ್ರೆಗಳು ಹಾಗೂ ನೂರಾರು ಔಷಧ ಮಳಿಗೆಗಳ ಮೂಲಕ 15 ಸಾವಿರಕ್ಕೂ ಹೆಚ್ಚು ರೋಗಿಗಳಿಗೆ ಔಷಧಗಳನ್ನು ಪೂರೈಸಲಾಗಿದೆ ಎಂಬ ಮಾಹಿತಿ ತನಿಖೆಯಿಂದ ಹೊರಬಂದಿದೆ.
ಈ ಜಾಲದ ಮೂಲಕ ಎಷ್ಟು ಇಂಜೆಕ್ಷನ್‌ಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗಿದೆ ಮತ್ತು ಇದರಿಂದ ಎಷ್ಟು ಹಣ ಗಳಿಸಲಾಗಿದೆ ಎಂಬುದರ ಕುರಿತು ಕರ್ನಾಟಕದ ಎಸ್‌ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಮತ್ತೊಂದೆಡೆ, ದೆಹಲಿ ಪೊಲೀಸರು 2 ಕೋಟಿ ರೂಪಾಯಿ ವಂಚನೆ ಪ್ರಕರಣದ ಆಯಾಮದಲ್ಲಿಯೂ ವಿಚಾರಣೆ ಮುಂದುವರಿಸಿದ್ದಾರೆ. ಈ ಜಾಲದಲ್ಲಿ ಇನ್ನೂ ಯಾರೆಲ್ಲ ಭಾಗಿಯಾಗಿದ್ದಾರೆ, ಆಸ್ಪತ್ರೆಗಳು ಮತ್ತು ಔಷಧ ಮಳಿಗೆಗಳ ಪಾತ್ರವೇನು ಎಂಬುದರ ಕುರಿತು ಮಾಹಿತಿ ಕಲೆಹಾಕಲಾಗುತ್ತಿದೆ.
ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳ ನಂಬಿಕೆ ಮತ್ತು ಅನಿವಾರ್ಯತೆಯನ್ನು ದುರುಪಯೋಗಪಡಿಸಿಕೊಂಡಿರುವ ಆರೋಪ ಸಾರ್ವಜನಿಕ ವಲಯದಲ್ಲಿ ಆತಂಕ ಮೂಡಿಸಿದೆ. ತನಿಖೆ ಪೂರ್ಣಗೊಂಡ ಬಳಿಕ ಈ ವಂಚನೆಯ ಜಾಲದ ಸಂಪೂರ್ಣ ಚಿತ್ರಣ ಹೊರಬೀಳುವ ನಿರೀಕ್ಷೆಯಿದೆ.
