ಮುಂಬೈ: ಬ್ರಿಟನ್ ರಾಜಮನೆತನದ ರಾಜಕುಮಾರ ವಿಲಿಯಂ ಹಾಗೂ ಅವರ ಪತ್ನಿ ರಾಜಕುಮಾರಿ ಕೇಟ್ ಮಿಡ್ಲಟನ್ ಅವರು ಭಾರತ ಪ್ರವಾಸ ಕೈಗೊಂಡಿದ್ದು, ಸೋಮವಾರ ಮುಂಬೈಗೆ ಆಗಮಿಸಿದ್ದಾರೆ. ಹತ್ತು ವರ್ಷಗಳ ಬಳಿಕ ಭಾರತಕ್ಕೆ ಭೇಟಿ ನೀಡಿರುವ ರಾಜಮನೆತನದ ದಂಪತಿ, ಮುಂಬೈನಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಗಮನ ಸೆಳೆದಿದ್ದಾರೆ.
ಸೋಮವಾರದಿಂದ ಬುಧವಾರದವರೆಗೆ ನಡೆಯಲಿರುವ 2026ರ ಪ್ರತಿಷ್ಠಿತ ‘ಅರ್ತ್‌ಶಾಟ್’ ಪ್ರಶಸ್ತಿಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ವಿಲಿಯಂ ಮತ್ತು ಕೇಟ್ ಪಾಲ್ಗೊಂಡಿದ್ದಾರೆ. ಪರಿಸರ ಸಂರಕ್ಷಣೆ, ಹವಾಮಾನ ಬದಲಾವಣೆ ತಡೆ ಹಾಗೂ ಸುಸ್ಥಿರ ಅಭಿವೃದ್ಧಿಗೆ ಕೊಡುಗೆ ನೀಡುವ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಗುರುತಿಸುವುದು ಈ ಪ್ರಶಸ್ತಿಯ ಮುಖ್ಯ ಉದ್ದೇಶವಾಗಿದೆ.
ಮುಂಬೈಗೆ ಆಗಮಿಸಿದ ದಂಪತಿ, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ಭೇಟಿಯ ವಿಶೇಷವೆಂದರೆ, ಸಚಿನ್ ಅವರೊಂದಿಗೆ ಮುಂಬೈನ ಬೀದಿಬದಿಯ ತಿನಿಸುಗಳನ್ನು ಸವಿಯುತ್ತಾ ನಗರದ ಪ್ರಮುಖ ಪ್ರದೇಶಗಳಲ್ಲಿ ಸುತ್ತಾಡಿದರು.
ಇದೇ ವೇಳೆ ದೇಶದ ಅತ್ಯಂತ ಹಳೆಯ ಛಾಯಾಗ್ರಹಣ ಸ್ಟುಡಿಯೊಗಳಲ್ಲಿ ಒಂದಾದ ಹ್ಯಾಮಿಲ್ಟನ್ ಸ್ಟುಡಿಯೋಸ್ ಮುಂಭಾಗದಲ್ಲಿ ಸಚಿನ್ ತೆಂಡೂಲ್ಕರ್ ಹಾಗೂ ಮಕ್ಕಳೊಂದಿಗೆ ಕ್ರಿಕೆಟ್ ಆಡುವ ಮೂಲಕ ಎಲ್ಲರ ಗಮನ ಸೆಳೆದರು.
ಈ ಕ್ರಿಕೆಟ್ ಆಟದಲ್ಲಿ ಸಚಿನ್ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸಿದರು. ಬ್ಯಾಟಿಂಗ್ ಮಾಡುತ್ತಿದ್ದ ರಾಜಕುಮಾರ ವಿಲಿಯಂ ವಿಕೆಟ್ ಒಪ್ಪಿಸಿದ ಬಳಿಕ ಬೌಲಿಂಗ್ ಮಾಡುತ್ತಿದ್ದ ಯುವತಿಗೆ ಹಸ್ತಲಾಘವ ಮಾಡಿದರು. ವಿಲಿಯಂ ಬ್ಯಾಟಿಂಗ್ ಮಾಡುವಾಗ ಪತ್ನಿ ಕೇಟ್ ಚಪ್ಪಾಳೆ ತಟ್ಟುತ್ತಾ ಪ್ರೋತ್ಸಾಹಿಸಿದರು. ನಂತರ ಕೇಟ್ ಕೂಡ ಬ್ಯಾಟ್ ಹಿಡಿದು ಕ್ರಿಕೆಟ್ ಆಡಿ ಸಂಭ್ರಮಿಸಿದರು.
ಬ್ರಿಟನ್ ರಾಜಮನೆತನದ ವತಿಯಿಂದ ನೀಡಲಾಗುವ ವಾರ್ಷಿಕ ಅರ್ತ್‌ಶಾಟ್ ಪ್ರಶಸ್ತಿಯನ್ನು ಐದು ವ್ಯಕ್ತಿಗಳು ಅಥವಾ ಸಂಸ್ಥೆಗಳಿಗೆ ನೀಡಲಾಗುತ್ತದೆ. ಪ್ರತಿ ವಿಜೇತರಿಗೆ ತಲಾ ₹12.25 ಕೋಟಿ ಬಹುಮಾನ ನೀಡಲಾಗುತ್ತದೆ.
ಮುಂಬೈ ಕಾರ್ಯಕ್ರಮಗಳ ಬಳಿಕ ರಾಜಕುಮಾರ ವಿಲಿಯಂ ಮತ್ತು ಕೇಟ್ ದಂಪತಿ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ. ಈ ಹಿಂದೆ 2016ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಈ ದಂಪತಿ, ಒಂದು ದಶಕದ ಬಳಿಕ ಮತ್ತೊಮ್ಮೆ ದೇಶಕ್ಕೆ ಆಗಮಿಸಿದ್ದಾರೆ.
ಈ ಪ್ರವಾಸವು ಭಾರತ ಮತ್ತು ಬ್ರಿಟನ್ ನಡುವಿನ ರಾಜತಾಂತ್ರಿಕ ಸಂಬಂಧಗಳ ಜೊತೆಗೆ ಇಂಧನ, ಸುಸ್ಥಿರ ಸಾರಿಗೆ, ಪರಿಸರ ಸಂರಕ್ಷಣೆ ಹಾಗೂ ವ್ಯಾಪಾರ ಕ್ಷೇತ್ರಗಳ ಸಹಕಾರವನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆ ಮೂಡಿಸಿದೆ.
